ಮೈಸೂರು, ಮಾರ್ಚ್ 4, 2026 : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿರುವುದು ಸ್ವಾಗತಾರ್ಹವಾಗಿದ್ದು, ಇದರೊಂದಿಗೆ ಕಳೆದ 35 ವರ್ಷಗಳ ಸುದೀರ್ಘ ಹೋರಾಟಕ್ಕೆ ತಾರ್ಕಿಕ ಜಯ ಸಿಕ್ಕಂತಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ನ್ಯಾಯಪರ ವಕೀಲರ ವೇದಿಕೆ ಗಂಭೀರ ಆರೋಪ ಮಾಡಿದೆ.
ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಅರುಣ್ ಕುಮಾರ್ ಅವರು, ಒಳಮೀಸಲಾತಿ ವಿಚಾರದಲ್ಲಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಕುತಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಚಿವ ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಣ್ತಪ್ಪಿಸಿ ಒಳಮೀಸಲಾತಿ ಜಾರಿ ಆಗದಂತೆ ಜಾಲ ಹೆಣೆದಿದ್ದಾರೆ ಎಂದು ಆರೋಪಿಸಿದ ಅರುಣ್ ಕುಮಾರ್, ಸದ್ಯ ಈ ಕುರಿತು ಹೈಕೋರ್ಟ್‌ನಲ್ಲಿ ಎರಡು ರಿಟ್ ಅರ್ಜಿಗಳು ಬಾಕಿ ಇರುವುದನ್ನು ಉಲ್ಲೇಖಿಸಿದರು. ಪರಿಶಿಷ್ಟ ಜಾತಿಗೆ ಶೇ. 17ರಷ್ಟು ಮೀಸಲಾತಿ ನೀಡುವುದು ಕಾನೂನುಬಾಹಿರ ಎಂದು ಮಹೀಂದ್ರ ಕುಮಾರ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದರೂ ಅಂತಿಮ ಆದೇಶ ನೀಡಬಾರದು ಮತ್ತು ಹೊಸ ನೇಮಕಾತಿಗಳನ್ನು ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದ್ದರೂ, ಸರ್ಕಾರವು ಅದನ್ನು ನಿರ್ಲಕ್ಷಿಸುತ್ತಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, ಮಾದಿಗ ಸಮುದಾಯದ ಪಾಲಿಗೆ ಸಚಿವ ಮಹದೇವಪ್ಪ ಅವರೇ ನಂಬರ್ ಒನ್ ಶತ್ರುವಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಮಾದಿಗರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸಚಿವರಾದ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಜಿ. ಪರಮೇಶ್ವರ್ ಹಾಗೂ ಹಿರಿಯ ಅಧಿಕಾರಿ ರಂದೀಪ್ ಅವರು ಒಂದೇ ಸಮುದಾಯಕ್ಕೆ ಸೇರಿದ್ದು, ಇವರೆಲ್ಲರೂ ಸೇರಿ ಮಾದಿಗ ಸಮುದಾಯಕ್ಕೆ ನಿರಂತರ ಅನ್ಯಾಯ ಎಸಗುತ್ತಿದ್ದಾರೆ. ಮಹದೇವಪ್ಪ ಅಂಡ್ ಟೀಮ್ ಡಿಪಿಆರ್ ಸೆಕ್ಷನ್ ಅನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಾಯಕ ಸಮುದಾಯವನ್ನು ಕೂಡ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರವು ಈ ಕೂಡಲೇ 56,432 ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿರುವ ಡಿಪಿಆರ್ ಆದೇಶವನ್ನು ಹಿಂಪಡೆಯಬೇಕು ಮತ್ತು ಈ ಎಲ್ಲಾ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಅನ್ವಯಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮಾದಿಗ ವಿರೋಧಿ ಎಂಬ ಹಣೆಪಟ್ಟಿ ಅಂಟಿಕೊಳ್ಳಲಿದೆ. ಒಳಮೀಸಲಾತಿ ಪೂರ್ಣಪ್ರಮಾಣದಲ್ಲಿ ಜಾರಿಯಾಗದಿದ್ದಲ್ಲಿ ರಾಜ್ಯದಲ್ಲಿ ರಕ್ತ ಕ್ರಾಂತಿಯಾಗುವುದು ನಿಶ್ಚಿತ ಎಂದು ವಕೀಲ ಅರುಣ್ ಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
