ಮೈಸೂರು, ಜನವರಿ 7, 2026 : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಹಂಚಿಕೆ ವಿಚಾರವಾಗಿ ಈಗಲೇ ಬಿರುಸಿನ ಪೈಪೋಟಿ ಆರಂಭವಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಹಾಗೂ ಹಾಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಟಿಕೆಟ್ ಯಾರಿಗೆ ನೀಡಬೇಕು ಎಂಬುದು ಪಕ್ಷದ ಹೈಕಮಾಂಡ್‌ನ ಅಂತಿಮ ನಿರ್ಧಾರವಾಗಿರುತ್ತದೆ ಎಂಬ ಕನಿಷ್ಠ ಅರಿವು ಪ್ರತಾಪ್ ಸಿಂಹ ಅವರಿಗೆ ಇರಬೇಕಿತ್ತು ಎಂದು ನಾಗೇಂದ್ರ ಕಿಡಿಕಾರಿದರು. ತಾವು ಸದಾ ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದು, ತಮ್ಮ ಮೇಲೆ ಯಾವುದೇ ಆಪಾದನೆಗಳಿಲ್ಲ ಹಾಗೂ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿಲ್ಲ ಎಂದು ಪ್ರತಾಪ್ ಸಿಂಹ ಅವರನ್ನು ಟೀಕಿಸಿದರು.
ಪ್ರತಾಪ್ ಸಿಂಹ ಅವರ ಇತ್ತೀಚಿನ ನಡೆಗಳನ್ನು ಟೀಕಿಸಿದ ನಾಗೇಂದ್ರ ಅವರು, ಪಾರ್ಲಿಮೆಂಟ್ ಟಿಕೆಟ್ ಹಂಚಿಕೆ ಸಂದರ್ಭದಲ್ಲಿಯೂ ಇವರು ಇದೇ ರೀತಿ ಮಾತನಾಡಿದ್ದರು, ಹಾಗಾದರೆ ಇವರಿಗೆ ಸಂಸತ್ ಟಿಕೆಟ್ ಯಾಕೆ ಸಿಗಲಿಲ್ಲ ಎಂದು ಪ್ರಶ್ನಿಸಿದರು. ಕಳೆದ ಬಾರಿ ಪಾರ್ಲಿಮೆಂಟ್ ಹಾಗೂ ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕೆ ಇವರು ಬರಲೇ ಇಲ್ಲ ಎಂದು ದೂರಿದ ಅವರು, ಕಳೆದ ಚುನಾವಣೆಯಲ್ಲಿ ಯದುವೀರ್ ಅವರಿಗೆ ಚಾಮರಾಜ ಕ್ಷೇತ್ರದಿಂದ ಸುಮಾರು 56,500 ಮತಗಳ ಭಾರಿ ಮುನ್ನಡೆ ತಂದುಕೊಟ್ಟಿರುವುದನ್ನು ನೆನಪಿಸಿದರು. ತಮ್ಮನ್ನು ತಾವು ‘ಹಿಂದೂ ಹುಲಿ’ ಎಂದು ಕರೆದುಕೊಳ್ಳುವ ಹಾಗೂ ರಾಜ್ಯ ನಾಯಕರಾಗಿ ಬೆಳೆದಿರುವ ಪ್ರತಾಪ್ ಸಿಂಹ ಅವರು ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ, ಚಾಮರಾಜ ಕ್ಷೇತ್ರದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು ಬೇಡ ಎಂದು ನಾಗೇಂದ್ರ ಕಿವಿಮಾತು ಹೇಳಿದರು.
ಮುಂದುವರಿದು ಮಾತನಾಡಿದ ಅವರು, ತಾವು ಇದೇ ಊರಿನವರಾಗಿದ್ದು ತಮಗೆ ಬೇರೆ ಕಡೆ ಹೋಗಲು ಸಾಧ್ಯವಿಲ್ಲ, ಆದ್ದರಿಂದ ತಮ್ಮ ಹೋರಾಟವೇನಿದ್ದರೂ ಸ್ವಂತ ಊರಿನಲ್ಲೇ ಇರಲಿದೆ ಎಂದು ಹೇಳಿದರು. ಮಂಡಲದ ಅಧ್ಯಕ್ಷರು ಮತ್ತು ಸುಮಾರು ನೂರರಷ್ಟು ಪಟ್ಟು ಹೆಚ್ಚು ಕಾರ್ಯಕರ್ತರು ಹಾಗೂ ಸ್ನೇಹಿತರು ತಮ್ಮ ಜೊತೆಗಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, 2028ರ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುವುದು ಖಚಿತ ಎಂಬ ಆಶಯ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿದ್ದುಕೊಂಡು ಪಕ್ಷದ ನಾಯಕರ ವಿರುದ್ಧವೇ ‘ಕವರ್ ಸಂಸ್ಕೃತಿ’ಯಂತಹ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ನಾಗೇಂದ್ರ, ಪ್ರತಾಪ್ ಸಿಂಹ ಅವರು ಮುಂದಿನ ದಿನಗಳಲ್ಲಿ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಲಿ ಎಂದು ಖಡಕ್ ಎಚ್ಚರಿಕೆ ನೀಡಿದರು.
