ಮೈಸೂರು, ನವೆಂಬರ್ 26, 2025 : ಮೈಸೂರು ಕೇಂದ್ರ ಕಾರಾಗೃಹದಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಒಂದು ಗ್ರಾಂ ಗಾಂಜಾ, ಬೀಡಿ, ಸಿಗರೇಟ್ ಸೇರಿದಂತೆ ಐದು ಸಾವಿರ ನಗದನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ್ದ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮೈಸೂರು ಪೊಲೀಸರು ಕೇಂದ್ರ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಪೊಲೀಸರ ದಾಳಿ ಸಂದರ್ಭದಲ್ಲಿ ಏರ್‌ಟೆಲ್ ಸಿಮ್ ಹೊಂದಿದ್ದ 1 ಕೀಪ್ಯಾಡ್ ಫೋನ್, ಒಂದು ಗ್ರಾಂ ಗಾಂಜಾ, ಬೀಡಿ, ಸಿಗರೇಟ್, ನಾಲ್ಕು ಗಾಂಜಾ ಸೇವನೆ ಪೈಪ್‌ಗಳು ಹಾಗೂ ಐದು ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ಸಂದರ್ಭದಲ್ಲಿ ಡಿಸಿಪಿ ಬಿಂದುಮಣಿ, ಎಸಿಪಿಗಳು ಹಾಗೂ ವಿವಿಧ ಠಾಣೆಯ ನಿರೀಕ್ಷಕರು ಇದ್ದರು.
