ಧಾರವಾಡ, ಜನವರಿ 28, 2026: ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್) ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ಶಿವಮೊಗ್ಗ ಮೂಲದ 24 ವರ್ಷದ ಡಾ. ಪ್ರಜ್ಞಾ ಪಾಲೇಗರ್ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇವಲ ಎರಡು ವಾರಗಳ ಹಿಂದಷ್ಟೇ ಈ ಸಂಸ್ಥೆಗೆ ಸೇರಿದ್ದ ಇವರನ್ನು ಭೇಟಿ ಮಾಡಲು ನಿನ್ನೆಯಷ್ಟೇ ಪೋಷಕರು ಬಂದು ಹೋಗಿದ್ದರು. ಪ್ರಜ್ಞಾ ಅವರು ಡಾ. ಪ್ರಿಯಾ ಪಾಟೀಲ್ ಎಂಬುವವರ ಜೊತೆ ರೂಮ್ ಹಂಚಿಕೊಂಡಿದ್ದರಾದರೂ, ಪೋಷಕರು ಬಂದಿದ್ದ ಕಾರಣ ಪ್ರಿಯಾ ನಿನ್ನೆ ರಾತ್ರಿ ಹೊರಗಡೆ ಉಳಿದುಕೊಂಡಿದ್ದರು.
ಈ ಸಮಯದಲ್ಲಿ ರೂಮಿನಲ್ಲಿ ಒಬ್ಬಳೇ ಇದ್ದ ಪ್ರಜ್ಞಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದು, ಇಂದು ಬೆಳಿಗ್ಗೆ ಪ್ರಿಯಾ ವಾಪಸ್ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಲ್ಲಿ ವ್ಯಾಸಾಂಗ ಮುಂದುವರಿಸಲು ಆಸಕ್ತಿ ಇಲ್ಲದ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
