ಮೈಸೂರು: ಬೇಸಿಗೆಯ ತಾಪ ಏರುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ವನ್ಯಜೀವಿಗಳ ದಾಹ ನೀಗಿಸಲು ಮೈಸೂರಿನ ಕೆ.ಎಂ.ಪಿ.ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಟ್ಟದ ನಂದಿ ವಿಗ್ರಹದ ಬಳಿ ಕೋತಿಗಳಿಗಾಗಿ ನೀರಿನ ತೊಟ್ಟಿಗಳನ್ನು ಅಳವಡಿಸಲಾಗಿದ್ದು, ಸ್ಥಳೀಯ ವ್ಯಾಪಾರಸ್ಥರು ಪ್ರತಿನಿತ್ಯ ಈ ತೊಟ್ಟಿಗಳಿಗೆ ನೀರು ತುಂಬಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಪಿ.ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಮನುಷ್ಯರಂತೆಯೇ ಪ್ರಾಣಿ-ಪಕ್ಷಿಗಳಿಗೂ ಈ ಭೂಮಿಯ ಮೇಲೆ ಬದುಕುವ ಸಮಾನ ಹಕ್ಕಿದೆ. ಮೂಕ ಜೀವಿಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಮೊಬೈಲ್ ತರಂಗಾಂತರಗಳ ಹೆಚ್ಚಳ ಹಾಗೂ ಅರಣ್ಯ ನಾಶದಿಂದಾಗಿ ಪಕ್ಷಿ ಸಂಕುಲ ಮಾಯವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಜರ್ಬಾದ್ ನಟರಾಜ್, ಕಡಕೋಳ ಗ್ರಾಮ ಪಂಚಾಯಿತಿ ಆರೋಗ್ಯ ಅಧಿಕಾರಿ ಮಂಜುನಾಥ್, ರವಿಚಂದ್ರ, ಲೋಕೇಶ್, ನಿತೇಶ್, ಕಡಕೋಳ ಶಿವು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
