ಮೈಸೂರು, ನವೆಂಬರ್ 28, 2025 : ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತಾರಕಕ್ಕೇರಿರುವ ಬೆನ್ನಲ್ಲೇ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಪೂಜೆಗಳು ಮುಂದುವರೆದಿವೆ. ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕೋರಿ ಅವರ ಅಭಿಮಾನಿಗಳು ಚಾಮುಂಡೇಶ್ವರಿ ದೇವಿಯ ಮೊರೆ ಹೋಗಿದ್ದಾರೆ.

ಶುಕ್ರವಾರ ಡಿಕೆಶಿ ಅಭಿಮಾನಿಗಳು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಡಿಕೆಶಿ ಅವರು ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿ, ಅಭಿಮಾನಿಗಳು ದೇವಸ್ಥಾನದ ಆವರಣದಲ್ಲಿ ಬೆಳ್ಳಿರಥ ಎಳೆದು ವಿಶೇಷ ಸೇವೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.ನಾದಸ್ವರದೊಂದಿಗೆ ಸಾಗಿದ ಬೆಳ್ಳಿಯ ರಥದ ಮುಂದೆ, ಅಭಿಮಾನಿಗಳು ಪೇಟ ತೊಟ್ಟ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರಗಳನ್ನು ಹಿಡಿದು ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಮಹಿಳಾ ಅಭಿಮಾನಿಗಳು ಚಾಮುಂಡೇಶ್ವರಿ ದೇವಿಯ ಅಷ್ಟೋತ್ತರವನ್ನು ಪಠಿಸಿ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಜೋರಾಗಿರುವ ಈ ಸಮಯದಲ್ಲಿ, ಸಿಎಂ ತವರು ಜಿಲ್ಲೆಯಲ್ಲೇ ನಡೆಯುತ್ತಿರುವ ಈ ಪೂಜೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ.
