ಮೈಸೂರು, ಜನವರಿ 17,2026 : ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ ಮೈಸೂರು ತಾಲ್ಲೂಕಿನ ಗುಡಮಾದನಹಳ್ಳಿಯಲ್ಲಿ ನಡೆದ ಈ ಘಟನೆಯು ಸರ್ಕಾರಿ ವ್ಯವಸ್ಥೆಯಲ್ಲಿನ ಭದ್ರತೆಯ ಪ್ರಶ್ನೆಯನ್ನು ಎತ್ತಿ ತೋರಿಸಿದೆ.
ಸಿಎಂ ಅವರದೇ ಕನಸಿನ ಯೋಜನೆಯಾದ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲಿಟ್ಟ ಸುಮಾರು ಇಪ್ಪತ್ತು ಎಕರೆ ಜಮೀನನ್ನು ಪರಿಶೀಲಿಸಲು ತೆರಳಿದ್ದ ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಅವರಿಗೆ ಕಹಿ ಅನುಭವ ಉಂಟಾಗಿದೆ. ಅಲ್ಲಿನ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ಮಾಡಿಕೊಂಡಿದ್ದ ಎನ್ನಲಾದ ಜಿ. ಎಂ. ಪುಟ್ಟಸ್ವಾಮಿ ಎಂಬ ವ್ಯಕ್ತಿ, ಕರ್ತವ್ಯ ನಿರತ ಮಹಿಳಾ ಅಧಿಕಾರಿಯನ್ನು ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅಷ್ಟಕ್ಕೇ ನಿಲ್ಲದೆ, ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದಕ್ಕಾಗಿ ತಹಸೀಲ್ದಾರ್ ವಿರುದ್ಧ ಆಕ್ರೋಶ ಹೊರಹಾಕಿ, ಅಧಿಕಾರಿಗಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ದೌರ್ಜನ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಪ್ರಯತ್ನಿಸಿದ ಗ್ರಾಮ ಸಹಾಯಕನ ಮೇಲೂ ಹಲ್ಲೆ ನಡೆಸಿ, ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ಅದರಲ್ಲಿನ ವಿಡಿಯೋ ಸಾಕ್ಷ್ಯಗಳನ್ನು ಅಳಿಸಿಹಾಕಿದ್ದಾನೆ. ಸರ್ಕಾರದ ಆದೇಶದಂತೆ ಸರ್ವೇ ನಂಬರ್ 8, 60 ಮತ್ತು 68ರಲ್ಲಿನ ಜಮೀನು ಸ್ವಾಧೀನಕ್ಕೆ ಮುಂದಾಗಿದ್ದ ಅಧಿಕಾರಿಗಳಿಗೆ ಈ ರೀತಿ ಪ್ರಾಣ ಬೆದರಿಕೆ ಒಡ್ಡಿರುವುದು ಗಂಭೀರ ಪ್ರಕರಣವಾಗಿದ್ದು, ಪ್ರಸ್ತುತ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ..
