ಕೇರಳ, ಡಿಸೆಂಬರ್ 16, 2025 : ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿ ತಿರುವನಂತಪುರಂ ಮಹಾನಗಪಾಲಿಕೆಯ ಗದ್ದುಗೆ ಬಿಜೆಪಿ ತೆಕ್ಕೆಗೆ ಬಿದ್ದಿದೆ.
101 ವಾರ್ಡ್ ಗಳ ಬಲ ಹೊಂದಿರುವ ತಿರುವನಂತರಪುರಂ ಮಹಾನಗರ ಪಾಲಿಕೆಯ 100 ವಾರ್ಡ್ ಗಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು. ಒಂದು ವಾರ್ಡ್ ನಲ್ಲಿ ಅಭ್ಯರ್ಥಿಯೋರ್ವರು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ರದ್ದಾಗಿತ್ತು. ಹಾಗಾಗಿ 100 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 50 ಕ್ಷೇತ್ರಗಳಲ್ಲಿ ಗೆದ್ದು ಬೀಗುವ ಮೂಲಕ ಕಾಂಗ್ರೆಸ್ ಮತ್ತು ಎಡಪಕ್ಷಗಳ (ಸಿಪಿಎಂ) ಮೈತ್ರಿಕೂಟಕ್ಕೆ ಬಿಗ್ ಶಾಕ್ ನೀಡಿದೆ.
ಎಡ ಪಕ್ಷಗಳ ಒಕ್ಕೂಟ 29 ಸ್ಥಾನ ಗಳಿಸಿದ್ದರೆ, ಕಾಂಗ್ರೆಸ್ 19 ವಾರ್ಡ್ ಗಳಲ್ಲಿ ಜಯಗಳಿಸಿದೆ. 2 ವಾರ್ಡ್ ಗಳು ಪಕ್ಷೇತರರ ಪಾಲಾಗಿವೆ. ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿತರೂರ್ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ನ ಪ್ರಭಾವಿ ನಾಯಕನ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದರೆ, ಕಾಂಗ್ರೆಸ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಅಲ್ಲದೇ ಕಳೆದ 45 ವರ್ಷಗಳಿಂದ ಸತತವಾಗಿ ಅಧಿಕಾರ ಹಿಡಿದಿದ್ದ ಸಿಪಿಎಂ ನ ಹಿಡಿತ ಸಡಿಲಗೊಂಡಿರುವುದು ಫಲಿತಾಂಶದಿಂದ ನಿಚ್ಚಳಗೊಂಡಿದೆ. ಇದೇ ಕಾರಣದಿಂದ ಇಲ್ಲಿನ ಫಲಿತಾಂಶವನ್ನು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಸಂಸದ ಶಶಿತರೂರ್ ಬಣ್ಣಿಸಿದ್ದಾರೆ.
ತಿರುವನಂತಪುರಂ ಕೇರಳದ ರಾಜಧಾನಿಯಾಗಿದೆ. ಇದೀಗ ತಿರುವನಂತಪುರಂ ಮಹಾನಗರ ಪಾಲಿಕೆಯ ಅಧಿಕಾರ ಹಿಡಿದಿರುವ ಬಿಜೆಪಿ ಇದೇ ಹುಮ್ಮಸ್ಸಿನಲ್ಲೇ ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಲು ಮುಂದಾಗಿದೆ. ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಾ ಬಂದಿದ್ದ ಕೇರಳದಲ್ಲಿ ಬಿಜೆಪಿ ಮೂರನೇ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಸೂಚನೆಗಳು ಸಿಕ್ಕಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡು ಬರುತ್ತಿದೆ.
ಕೇರಳದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಒಟ್ಟಾರೆ ಫಲಿತಾಂಶದಲ್ಲಿ ಆಡಳಿತಾರೂಢ ಸಿಪಿಎಂ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮೊದಲ ಸ್ಥಾನ ಗಳಿಸಿದೆ. ಮೂರನೇ ಸ್ಥಾನದಲ್ಲಿರುವ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ದೇವರ ನಾಡಿನಲ್ಲಿ ಬಿಜೆಪಿಯ ಬಲವರ್ಧನೆಯಾಗಿರುವುದು ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳ ನಿದ್ದೆಗೆಡಿಸಿದೆ. ಈ ಎರಡು ಪಕ್ಷಗಳ ದ್ವಿಮುಖ ನೀತಿಯೇ ಬಿಜೆಪಿಯ ಬಲವರ್ಧನೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ ರಾಜ್ಯದಲ್ಲಿ ಪರಸ್ಪರ ಪ್ರಬಲ ಎದುರಾಳಿಗಳಾಗಿರುವ ಕಾಂಗ್ರೆಸ್ ಮತ್ತು ಸಿಪಿಎಂ ರಾಷ್ಟ್ರಮಟ್ಟದಲ್ಲಿ ಇಂಡಿ ಒಕ್ಕೂಟದಲ್ಲಿ ಗುರ್ತಿಸಿಕೊಂಡಿವೆ. ಇದರ ಲಾಭ ಬಿಜೆಪಿಗೆ ಆಗಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಪೈಪೋಟಿ ಒಡ್ಡುವ ಸಾಧ್ಯತೆ ಇದೆ.
