ಮೈಸೂರು, ನವೆಂಬರ್ 29, 2025 : ಸಿಎಂ ಸಿದ್ದರಾಮಯ್ಯ ತವರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಡಿಕೆಶಿ ಅಭಿಮಾನಿಗಳು ಬೈಕ್ ಜಾಥಾ ನಡೆಸಿದ್ದಾರೆ.

ಒಂಟಿಕೊಪ್ಪಲಿನ ಚಂದ್ರಮೌಳೇಶ್ವರಸ್ವಾಮಿ ದೇಗುಲದ ಬಳಿಯಿಂದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಸುಮಾರು 5 ಕಿಲೋಮೀಟರ್ ವರೆಗೂ ಬೈಕ್ ಜಾಥಾ ಸಾಗಿದ್ದು, ಜಾಥಾಗೂ ಮುನ್ನ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದ ಮಹಾಸ್ವಾಮೀಜಿ ಚಂದ್ರಮೌಳೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದ ಮಹಾಸ್ವಾಮೀಜಿ ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ. ಡಿಕೆಗೆಶಿ ಸಿಎಂ ಸ್ಥಾನವನ್ನು ಕೊಡದಿದ್ರೇ ಪರಿಣಾಮ ಎದುರಿಸಬೇಕಾಗುತ್ತದೆ. ಒಕ್ಕಲಿಗ ಸಮುದಾಯ ಯಾವುದೇ ನಿರ್ಣಯ ತೆಗೆದುಕೊಳ್ಳೋದಿಲ್ಲ. ಕಾಂಗ್ರೆಸ್ ಶಕ್ತಿಯುತವಾಗಿ ಮುಂದುವರಿಬೇಕಾದ್ರೆ ಡಿಕೆಶಿಗೆ ಸಿಎಂ ಸ್ಥಾನ ಕೊಡಿ ಎಂದಿದ್ದಾರೆ.
ನಾವು ಸಿಎಲ್ ಪಿ ಸಭೆಗೆ ಹಸ್ತಕ್ಷೇಪ ಮಾಡ್ತಿಲ್ಲ, ಕಾಂಗ್ರೆಸ್ ಹೈಕಮಾಂಡ್ ಗೆ ಶಾಂತಿಯುತವಾಗಿಯೇ ಮನವಿ ಮಾಡ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ತರೋದ್ರಲ್ಲಿ ಡಿಕೆಶಿ ಪಾತ್ರ ಇದೆ. ಗ್ಯಾರಂಟಿ ಯೋಜನೆ ಸಿದ್ದಪಡಿಸಿ ಪಕ್ಷ ಅಧಿಕಾರಕ್ಕೆ ತರಲು ಡಿಸಿಎಂ ಪಾತ್ರ ದೊಡ್ಡದು. ಹಗಲು ರಾತ್ರಿ ಎನ್ನದೇ ಅರೋಗ್ಯವನ್ನು ಲೆಕ್ಕಿಸದೇ ಪಕ್ಷಕ್ಕಾಗಿ ದುಡಿದಿದ್ದಾರೆ. ಡಿ ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೊಡಬೇಕು ಎನ್ನೋದು ಸಮುದಾಯದ ಭಕ್ತರ ಒತ್ತಾಯ ಎಂದರು. ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಮಧ್ಯೆ ಒಪ್ಪಂದ ಆಗಿತ್ತು ಅನ್ನೋ ಮಾತಿದೆ.ಅಧಿಕಾರ ನೀಡುವ ಸಮಯದಲ್ಲಿ ಹಿರಿತನ ಪರಿಗಣಿಸಲಾಗಿದೆ. ಅದೇ ರೀತಿ ಡಿ ಕೆ ಶಿವಕುಮಾರ್ ಗೂ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
