ಹುಣಸೂರು, ಡಿಸೆಂಬರ್ 24, 2025 : ಮೈಸೂರು ಜಿಲ್ಲೆಯಲ್ಲಿ ಹುಲಿಗಳ ಹಾವಳಿ ಮುಂದುವರಿದಿದ್ದು, ಹುಣಸೂರು ತಾಲ್ಲೂಕಿನ ನೇಗತ್ತೂರು ಗ್ರಾಮದ ರೈತ ವರ್ಷಿತ್ ಗೌಡ ಎಂಬುವವರು ಎರಡು ಹುಲಿಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಈ ಗ್ರಾಮದಲ್ಲಿ ರೈತ ತನ್ನ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾಗ ಈ ಆತಂಕಕಾರಿ ಘಟನೆ ಸಂಭವಿಸಿದೆ. ಕೆಲಸದಲ್ಲಿ ಮಗ್ನರಾಗಿದ್ದ ವರ್ಷಿತ್ ಗೌಡ ಅವರ ಮೇಲೆ ಏಕಕಾಲಕ್ಕೆ ಎರಡು ಹುಲಿಗಳು ದಾಳಿಗೆ ಮುಂದಾದವು. ತಕ್ಷಣ ಎಚ್ಚೆತ್ತುಕೊಂಡ ರೈತ ಗಾಬರಿಯಾಗದೆ ಸಮಯಪ್ರಜ್ಞೆ ಮೆರೆದಿದ್ದಾರೆ. ಜೋರಾಗಿ ಕೂಗಿಕೊಳ್ಳುತ್ತಾ ಹುಲಿಗಳತ್ತಲೇ ಅಡ್ಡಾದಿಡ್ಡಿಯಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ರೈತನ ಈ ಧೈರ್ಯ ಮತ್ತು ಟ್ರ್ಯಾಕ್ಟರ್ ಅಬ್ಬರಕ್ಕೆ ಬೆದರಿದ ಹುಲಿಗಳು ದಾಳಿ ಕೈಬಿಟ್ಟು ಕಾಡಿನ ಕಡೆಗೆ ಓಡಿಹೋಗಿವೆ.
ರೈತ ವರ್ಷಿತ್ ಗೌಡ ಅವರು ಪ್ರಾಣಾಪಾಯದಿಂದ ಪಾರಾದರಾದರೂ, ಅದೇ ಜಮೀನಿನಲ್ಲಿದ್ದ ಹಸುವಿನ ಮೇಲೆ ಹುಲಿಗಳು ದಾಳಿ ಮಾಡಿವೆ. ಹಸುವಿನ ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ರೈತರು ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸತತವಾಗಿ ನಡೆಯುತ್ತಿರುವ ಹುಲಿ ದಾಳಿಗಳಿಂದ ಕಂಗೆಟ್ಟಿರುವ ಗ್ರಾಮಸ್ಥರು, ಅರಣ್ಯ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ಹುಲಿಗಳನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
