ಹುಣಸೂರು, ಮಾರ್ಚ್ 28, 2026: ತಾಲೂಕಿನ ರತ್ನಪುರಿ-ದಾಸನಪುರ ರಸ್ತೆಯ ಮಧ್ಯೆ ಇರುವ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಭಾರಿ ಪ್ರಮಾಣದ ಸಿಂಥೆಟಿಕ್ ಡ್ರಗ್ಸ್ ಪ್ಯಾಕ್ ಮಾಡುತ್ತಿದ್ದ ವೇಳೆ ಪೊಲೀಸರು ಭರ್ಜರಿ ದಾಳಿ ನಡೆಸಿ ಮಾಲು ವಶಪಡಿಸಿಕೊಂಡಿದ್ದಾರೆ.
ನಗರದ ರಹಮತ್ ಮೊಹಲ್ಲಾದ ಇರ್ಫಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ಸುಮಾರು 25 ಕೆ.ಜಿ.ಗೂ ಹೆಚ್ಚು ಮಾದಕ ವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ತೋಟದ ಮಾಲೀಕ ಇರ್ಫಾನ್ ಮತ್ತು ಮೈಸೂರು ಮೂಲದ ಇರ್ಫಾನ್ ಎಂಬುವವರು ಸೇರಿಕೊಂಡು ಈ ಕೃತ್ಯ ಎಸಗುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಸಂಜೆ ಪೊಲೀಸರು ಹಠಾತ್ ದಾಳಿ ನಡೆಸಿದರು. ಈ ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಸುಮಾರು 10 ಕಿ.ಮೀ ವರೆಗೆ ಚೇಸ್ ಮಾಡಿ, ನಗರದ ಸಲೀಂ ಪ್ಯಾಲೆಸ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಡಿವೈಎಸ್‌ಪಿ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೋಟದ ಮಾಲೀಕ ಇರ್ಫಾನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಂದೆಡೆ, ರತ್ನಪುರಿ ಲಾಡ್ಜ್ ಒಂದರಲ್ಲಿ ತಂಗಿದ್ದ ಹೊರ ರಾಜ್ಯದ ನಾಲ್ವರು ವ್ಯಕ್ತಿಗಳು ಪೊಲೀಸರ ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಹಿಂದೆ ಮೈಸೂರು ನಗರಕ್ಕೆ ಸೀಮಿತವಾಗಿದ್ದ ಡ್ರಗ್ಸ್ ಜಾಲ ಈಗ ಹಳ್ಳಿಗಳಿಗೂ ವ್ಯಾಪಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಪದೇ ಪದೇ ಇಂತಹ ಪ್ರಕರಣಗಳು ಪತ್ತೆಯಾಗುತ್ತಿರುವುದು ಗಂಭೀರ ಚಿಂತನೆಗೆ ಹಾದಿ ಮಾಡಿಕೊಟ್ಟಿದೆ.
