ಮೈಸೂರು, ನವೆಂಬರ್ 15, 2025 : ನಗರದ ಐತಿಹಾಸಿಕ ಚಾಮರಾಜೇಂದ್ರ ಮೃಗಾಲಯ ಇದೀಗ ಪ್ರಾಣಿಗಳ ತ್ಯಾಜ್ಯವನ್ನು ಸಮರ್ಥವಾಗಿ ಬಳಸಿಕೊಂಡು ತಯಾರಿಸುತ್ತಿರುವ ಅತ್ಯುನ್ನತ ಗುಣಮಟ್ಟದ ಎರೆಹುಳು ಗೊಬ್ಬರದಿಂದಾಗಿ ರಾಜ್ಯದ ಗಮನ ಸೆಳೆದಿದೆ. ಇಲ್ಲಿ ತಯಾರಾಗುತ್ತಿರುವ ಸಾವಯವ ಗೊಬ್ಬರಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಉಂಟಾಗಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಅನುಷಾ ಮಾಹಿತಿ ನೀಡಿದ್ದಾರೆ.

ಮೃಗಾಲಯದಲ್ಲಿನ ಪ್ರಾಣಿಗಳ ಲದ್ದಿ, ಪಕ್ಷಿಗಳ ಹಿಕ್ಕೆಗಳು, ಮರಗಳಿಂದ ಉದುರುವ ಎಲೆಗಳು ಹಾಗೂ ಪ್ರಾಣಿ-ಪಕ್ಷಿಗಳು ತಿಂದುಳಿದ ಮೇವಿನ ತ್ಯಾಜ್ಯವನ್ನು ಸಮಗ್ರವಾಗಿ ಸಂಗ್ರಹಿಸಲಾಗುತ್ತದೆ. ಈ ಎಲ್ಲ ಸಾವಯವ ತ್ಯಾಜ್ಯವನ್ನು ಬಳಸಿಕೊಂಡು ವೈಜ್ಞಾನಿಕ ವಿಧಾನದಲ್ಲಿ ಎರೆಹುಳುವಿನ ಸಹಾಯದಿಂದ ಉತ್ಕೃಷ್ಟ ದರ್ಜೆಯ ಎರೆಹುಳು ಗೊಬ್ಬರವನ್ನು (Vermicompost) ಇಲ್ಲಿ ತಯಾರಿಸಲಾಗುತ್ತಿದೆ.

ಮೈಸೂರು ಮೃಗಾಲಯದಲ್ಲಿ ತಯಾರಾಗುತ್ತಿರುವ ಈ ಸಾವಯವ ಗೊಬ್ಬರವು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಗೊಬ್ಬರಗಳ ದರಕ್ಕಿಂತ ಕಡಿಮೆ ಬೆಲೆಗೆ ರೈತರಿಗೆ ಲಭ್ಯವಾಗುತ್ತಿರುವುದು ಇದರ ಪ್ರಮುಖ ಆಕರ್ಷಣೆಯಾಗಿದೆ. ಇದರ ಉತ್ತಮ ಗುಣಮಟ್ಟ ಮತ್ತು ಕಡಿಮೆ ಬೆಲೆಯ ಕಾರಣದಿಂದಾಗಿ, ರೈತರು ಈ ಸಾವಯವ ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಮುಂದಾಗುತ್ತಿದ್ದಾರೆ. ಪ್ರಾಣಿಗಳ ಲದ್ದಿ ಹಾಗು ಇನ್ನಿತರ ತ್ಯಾಜ್ಯದಿಂದ ತಯಾರಿಸುತ್ತಿರುವ ನಮ್ಮ ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಪರಿಸರ ಸ್ನೇಹಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಜೊತೆಗೆ, ರೈತರಿಗೆ ಉತ್ತಮ ಸಾವಯವ ಗೊಬ್ಬರವನ್ನು ಕಡಿಮೆ ಬೆಲೆಯಲ್ಲಿ ನೀಡಲು ನಮಗೆ ಸಾಧ್ಯವಾಗಿದೆ ಎಂದು ತಿಳಿಸಿದರು.
