ಮೈಸೂರು, ಡಿಸೆಂಬರ್ 27, 2025 : ಮನೆಯ ಕೆಲಸಗಳಲ್ಲಿ ಮಗ್ನರಾಗಿರುವ ಮಹಿಳೆಯರೇ ಸ್ವಲ್ಪ ಇತ್ತ ಗಮನಹರಿಸಿ. ನೀವು ಪಾತ್ರೆ ತೊಳೆಯುವ ಜಾಗ ಅಥವಾ ತೊಳೆದಿಟ್ಟ ಪಾತ್ರೆಗಳ ನಡುವೆ ಅಪಾಯಕಾರಿ ಹಾವುಗಳು ಆಶ್ರಯ ಪಡೆಯುತ್ತಿರಬಹುದು! ಇಂತಹದ್ದೇ ಒಂದು ಆತಂಕಕಾರಿ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಟಿ.ಕೆ. ಲೇಔಟ್ ವ್ಯಾಪ್ತಿಯ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಮನೆಯ ವರಾಂಡದಲ್ಲಿ ಗೃಹಿಣಿಯೊಬ್ಬರು ಪಾತ್ರೆಗಳನ್ನು ತೊಳೆದು ಜೋಡಿಸಿಟ್ಟಿದ್ದರು. ಈ ವೇಳೆ ಯಾರಿಗೂ ತಿಳಿಯದಂತೆ ಪಾತ್ರೆಗಳ ನಡುವೆ ವಿಷಪೂರಿತ ನಾಗರಹಾವೊಂದು ಬಂದು ಸೇರಿಕೊಂಡಿತ್ತು.
ಪಾತ್ರೆಗಳನ್ನು ತೆಗೆಯಲು ಹೋದಾಗ ಹಾವಿರುವುದು ಪತ್ತೆಯಾಗಿದ್ದು, ಮನೆಯವರು ತಕ್ಷಣವೇ ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಮೈಸೂರಿನ ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶಾಮ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಶಾಮ್ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿದ್ದಾರೆ. ಬಳಿಕ ಹಾವನ್ನು ಜನವಸತಿ ಇಲ್ಲದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಮಳೆಗಾಲ ಅಥವಾ ತೇವಾಂಶವಿರುವ ಸಮಯದಲ್ಲಿ ಹಾವುಗಳು ಸುರಕ್ಷಿತ ತಾಣ ಹುಡುಕುತ್ತಾ ಮನೆಗಳೊಳಗೆ ಬರುವುದು ಸಾಮಾನ್ಯ. ಆದ್ದರಿಂದ ಪಾತ್ರೆ ತೊಳೆಯುವಾಗ ಅಥವಾ ಮೂಲೆಗಳಲ್ಲಿರುವ ವಸ್ತುಗಳನ್ನು ಮುಟ್ಟುವಾಗ ಎಚ್ಚರಿಕೆ ವಹಿಸುವಂತೆ ಉರಗ ತಜ್ಞರು ಸಲಹೆ ನೀಡಿದ್ದಾರೆ.
