ಮೈಸೂರು, ನವೆಂಬರ್ 12, 2025 : ಇತ್ತೀಚಿಗೆ ದೆಹಲಿ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸರಿಂದ ಸಾಕಷ್ಟು ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯೊಂದಿಗೆ 10 ವಿಶೇಷ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಿ ಮೈಸೂರಿನ ಸುರಕ್ಷತೆಗೆ ಪೊಲೀಸರ ಜೊತೆ ಕೈ ಜೋಡಿಸಬೇಕೆಂದು ಮೈಸೂರು ಪೊಲೀಸ್ ಕಮೀಷ್ನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಚೆಕ್‌ಪೋಸ್ಟ್ನ ಸಿಬ್ಬಂದಿ ನಗರಕ್ಕೆ ಬರುವ ಹಾಗೂ ನಿರ್ಗಮಿಸುವ ವಾಹನಗಳನ್ನು ತಪಾಸಣೆ ಮಾಡುತ್ತಾರೆ ಮತ್ತು ನಗರಕ್ಕೆ ಬರುವ ವ್ಯಕ್ತಿಗಳ ಮಾಹಿತಿಯನ್ನು ಪರಿಶೀಲಿಸಿ ದಾಖಲಿಸಿಕೊಳ್ಳುತ್ತಾರೆ. ಇದರ ಜೊತೆಗೆ ಮೈಸೂರು ಅರಮನೆ, ಚಾಮುಂಡಿ ಬೆಟ್ಟದ ದೇವಸ್ಥಾನ, ದಸರಾ ವಸ್ತು ಪ್ರದರ್ಶನ ಮೈದಾನದಂತಹ ಹೆಚ್ಚಿನ ಜನದಟ್ಟಣೆ ಇರುವ ಸ್ಥಳಗಳ ಪ್ರವೇಶ ದ್ವಾರದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಹೆಚ್ಚುವರಿ ಡಿಎಫ್‌ಎಂಡಿಗಳು ಹಾಗೂ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು ಮತ್ತು ಶಾಪಿಂಗ್ ಸಂಕೀರ್ಣಗಳು ಮತ್ತು ಮಾಲ್‌ಗಳಂತಹ ಸ್ಥಳಗಳಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಗುರುತಿಸಲು ಆಗಾಗ್ಗೆ ಎ ಎಸ್ ತಪಾಸಣೆ ನಡೆಸಲಾಗುತ್ತದೆ. ನಗರದ ಎಲ್ಲಾ ವಸತಿಗೃಹಗಳು, ಹೋಂಸ್ಟೇ, ಡಾರ್ಮಿಟರಿಗಳು, ಹೋಟೆಲ್‌ಗಳಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತದೆ. ನಗರದಲ್ಲಿ ನೆಲೆಸಿರುವ ಹೊಸಬರ ಬಗ್ಗೆ ಸಂಫೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ ಮತ್ತು ಅವರ ಭೇಟಿಯ ಉದ್ದೇಶವನ್ನು ಸಹ ಪರಿಶೀಲಿಸಲಾಗುತ್ತದೆ.
ಇನ್ನು ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ನಿರ್ಧರಿಸಲಾಗಿದೆ. ಅನಗತ್ಯವಾದ, ಪ್ರಚೋದನಕಾರಿ ಹಾಗೂ ಶಾಂತಿ ಕದಡುವಂತಹ ಪೋಸ್ಟ್ ಹಾಕುವವರ ವಿರುದ್ದ ಕಟ್ಟುನಿಟ್ಟಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಸಮಾಜದಲ್ಲಿ ಅಭದ್ರತೆ ಮತ್ತು ಶಾಂತಿಗೆ ಧಕ್ಕೆಯಾಗದಂತೆ ತಡೆಯಲು ಈ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಸೂರು ನಗರ ಹಾಗೂ ನಾಗರೀಕರ ಹಿತದೃಷ್ಟಿಯಿಂದ ಈ ಎಲ್ಲಾ ನಿರ್ಧಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕರಿಸಿ ಮೈಸೂರಿನ ಸುರಕ್ಷತೆಗೆ ಪೊಲೀಸರ ಜೊತೆ ಕೈ ಜೋಡಿಸಿ ಎಂದು ತಿಳಿಸಿದ್ದಾರೆ.
