ಮೈಸೂರು, ಡಿಸೆಂಬರ್ 27, 2025 : ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಎನ್ನುವವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಲಕ್ಷ್ಮೀ ಕುಟುಂಬದವರ ಜೊತೆಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿತ್ತು.
ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವ್ಯಾಪಾರ ಕೂಡಾ ಜೋರಾಗಿತ್ತು. ಅದ್ರಂತೆ ಗುರುವಾರ ರಾತ್ರಿ 8.30 ರ ಹೊತ್ತಲ್ಲಿ ಉತ್ತರ ಪ್ರದೇಶ ಮೂಲದ ಸಲೀಂ, ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದ. ಬಲೂನ್‌ಗೆ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟವಾಗಿದ್ದು, ಸಲೀಂ ಅಲ್ಲೇ ಪ್ರಾಣ ಬಿಟ್ಟಿದ್ದ. ನಾಲ್ಕೈದು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಸ್ಫೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ನಂಜನಗೂಡಿನ ಮಂಜುಳ ಆಸ್ಪತ್ರೆಯಲ್ಲಿ ಉಸಿರು ನಿಲ್ಲಿಸಿದ್ದಾರೆ. ಮೈಸೂರಿನಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಂಜುಳ ವ್ಯಾಪಾರ ಮುಗಿಸಿಕೊಂಡು ಬಸ್ ಹತ್ತಲು ಹೋಗುತ್ತಿದ್ದರು. ಹೀಗೆ ಹೋಗುವಾಗಲೇ ಸಿಲಿಂಡ್ ಸ್ಫೋಟಕ್ಕೆ ಬಲಿ ಆಗಿದ್ದಾರೆ.
