ನಂಜನಗೂಡು, ಮಾರ್ಚ್ 21, 2026 : ತಾಲೂಕಿನ ಹನುಮನಪುರ ಗ್ರಾಮದಲ್ಲಿ ಚಿರತೆಯೊಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ಮಾಡಿ ಅದನ್ನು ಬಲಿ ಪಡೆದಿದೆ. ಈ ಘಟನೆಯು ಶನಿವಾರ ಬೆಳಗಿನ ಜಾವ ನಡೆದಿದ್ದು, ಗ್ರಾಮದ ರೈತ ರವೀಶ್ ಎಂಬುವವರಿಗೆ ಸೇರಿದ ಕರು ಚಿರತೆ ಬಾಯಿಗೆ ಆಹಾರವಾಗಿದೆ.

ಬೆಳಗಿನ ಜಾವದ ಸಮಯದಲ್ಲಿ ಕೊಟ್ಟಿಗೆಗೆ ನುಗ್ಗಿದ ಚಿರತೆಯು ಕರುವನ್ನು ಬರ್ಬರವಾಗಿ ಕೊಂದು, ಅದನ್ನು ಸ್ವಲ್ಪ ದೂರ ಎಳೆದಾಡಿ ಅರೆಬರೆ ತಿಂದು ಹಾಕಿ ಸ್ಥಳದಿಂದ ಪರಾರಿಯಾಗಿದೆ. ನಂಜನಗೂಡು ತಾಲೂಕಿನ ಹನುಮನಪುರ ಮಾತ್ರವಲ್ಲದೆ, ಪಕ್ಕದ ಕೊಣನೂರು ಹಾಗೂ ಚುಂಚನಹಳ್ಳಿ ಗ್ರಾಮಗಳಲ್ಲೂ ಕಳೆದ ಕೆಲವು ದಿನಗಳಿಂದ ಚಿರತೆಗಳ ಉಪಟಳ ಗಣನೀಯವಾಗಿ ಹೆಚ್ಚಾಗಿದೆ. ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಯುತ್ತಿರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮತ್ತು ರೈತರು, ಕೂಡಲೇ ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು ಹಾಗೂ ಕರುವನ್ನು ಕಳೆದುಕೊಂಡ ರೈತ ರವೀಶ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
