ಮೈಸೂರು, ಫೆಬ್ರವರಿ 2,2026 : ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ರೈತರ ಪಾಲಿಗೆ ಕೇವಲ “ಮೂಗಿಗೆ ತುಪ್ಪ ಸವರುವ” ಕೆಲಸವಾಗಿದ್ದು, ಇದು ಕೃಷಿಕರ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಕಟುವಾಗಿ ಟೀಕಿಸಿದ್ದಾರೆ.
ದೇಶದ ರೈತ ಸಮುದಾಯ ದಶಕಗಳಿಂದ ಒತ್ತಾಯಿಸುತ್ತಿರುವ ಎಂ.ಎಸ್.ಪಿ (ಕನಿಷ್ಠ ಬೆಂಬಲ ಬೆಲೆ) ಖಾತ್ರಿ ಕಾಯ್ದೆಯ ಜಾರಿ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಗಟ್ಟಿ ಕ್ರಮಗಳನ್ನು ಕೈಗೊಂಡಿಲ್ಲದಿರುವುದು ಮತ್ತು ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ರೈತರಲ್ಲಿ ತೀವ್ರ ನಿರಾಶೆ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಬಜೆಟ್‌ನಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಮತ್ತು ಕೃಷಿ ಸಾಲ ನೀತಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಬದಲಾವಣೆಗಳಿಲ್ಲದಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ. ವಿಶೇಷವಾಗಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತದ ಸಮಸ್ಯೆ ಹಾಗೂ ಹೊಲದಲ್ಲಿನ ಕಬ್ಬಿನ ದರದ ಬಗ್ಗೆ ಬಜೆಟ್ ಮೌನ ವಹಿಸಿರುವುದು ಕೃಷಿಕರ ಹಿತಾಸಕ್ತಿಯನ್ನು ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ. ಬೆಳೆ ವಿಮೆ ಯೋಜನೆಯು ಪ್ರಸ್ತುತ ಇರುವ ಘಟಕ ಆಧಾರಿತ ವ್ಯವಸ್ಥೆಯ ಬದಲಿಗೆ ಪ್ರತಿ ರೈತನ ಹೊಲವನ್ನು ಪರಿಗಣಿಸುವ ವೈಯಕ್ತಿಕ ವಿಮೆ ರೀತಿಯಲ್ಲಿ ಜಾರಿಗೆ ಬರಬೇಕಿತ್ತು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿತ್ತು, ಆದರೆ ಈ ಬಗ್ಗೆ ಸರ್ಕಾರ ಯಾವುದೇ ಆಸಕ್ತಿ ತೋರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ವರ್ಷಪೂರ್ತಿ ಖರೀದಿಸಲು ಅನುಕೂಲವಾಗುವಂತೆ ಖರೀದಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಅಥವಾ ಬೆಲೆ ಕುಸಿತ ಉಂಟಾದಾಗ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಸರ್ಕಾರವೇ ಖರೀದಿಸುವ ಯಾವುದೇ ಹೊಸ ಯೋಜನೆಯನ್ನು ಈ ಬಜೆಟ್ ಘೋಷಿಸಿಲ್ಲ. ಕೇವಲ ತೆಂಗು, ಗೋಡಂಬಿ ಮತ್ತು ಶ್ರೀಗಂಧದಂತಹ ಕೆಲವು ಆಯ್ದ ಬೆಳೆಗಳಿಗೆ ಮಾತ್ರ ವಿಶೇಷ ಗಮನಹರಿಸುವ ಮೂಲಕ ಸರ್ಕಾರವು ಇಡೀ ರೈತ ಸಮುದಾಯಕ್ಕೆ ಸಮಾಧಾನದ ಭರವಸೆ ನೀಡಲು ಪ್ರಯತ್ನಿಸಿದೆಯೇ ಹೊರತು, ಕೃಷಿ ವಲಯದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ ಎಂದು ಭಾಗ್ಯರಾಜ್ ಅವರು ಕಿಡಿಕಾರಿದ್ದಾರೆ.
