ಮೈಸೂರು, ನವೆಂಬರ್ 28, 2025 : ಜಾತಿ ಸಂಘರ್ಷ ದೇಶಕ್ಕೆ ಅಪಾಯಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲೇಬೇಕು ಎಂದು ಒತ್ತಾಯಿಸಿದರು.
ಪಕ್ಷಗಳ ನಡುವಿನ ಸಂಘರ್ಷ ಸಾಮಾನ್ಯ. ಆದರೆ, ಜಾತಿ ಸಂಘರ್ಷವು ಅಪಾಯಕಾರಿ.ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಟಾರ್ಗೆಟ್ ಮಾಡಿ ಡಾ. ಯತೀಂದ್ರ ಮಾತನಾಡಿದ್ದು ಸರಿಯಲ್ಲ. ಸಿದ್ದರಾಮಯ್ಯ ಪರವಾಗಿ ನಿರಂಜನಾನಂದಪುರಿ ಸ್ವಾಮೀಜಿ ಕೂಡ ಮಾತನಾಡಿದ್ದಾರೆ. ಹಾಗಾಗಿ, ನಿರ್ಮಲಾನಂದನಾಥ ಸ್ವಾಮೀಜಿ ಗುರಿಯಾಗಿಸಿಕೊಂಡು ಯತೀಂದ್ರ ಮಾತನಾಡಬಾರದಿತ್ತು. ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಯದೇ ಏನೇನೋ ಕೇಳಿ ಬರುತ್ತಿದೆ. ಡಿ.ಕೆ ಶಿವಕುಮಾರ್ ಹುಟ್ಟಾ ಕಾಂಗ್ರೆಸ್ಸಿಗ. ಅವರಿಗೆ ಅಧಿಕಾರ ಹಸ್ತಾಂತರ ಮಾಡಲೇಬೇಕು.
ಸಿದ್ದರಾಮಯ್ಯರನ್ನು ಕಾಂಗ್ರೆಸ್‌ಗೆ ಕರೆತಂದಾಗ ‘ಈ ದುರಹಂಕಾರಿಯನ್ನು ಏಕೆ ಕರೆ ತರುತ್ತಿದ್ದೀರಿ’ ಎಂದು ಹಲವಾರು ನಾಯಕರು ಹೇಳಿದರು. ಆದರೆ, ಕಾಂಗ್ರೆಸ್‌ಗೆ ಕರೆತಂದವರನ್ನೇ ಸಿದ್ದರಾಮಯ್ಯ ಮುಗಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ಡಿ.ಕೆ ಶಿವಕುಮಾರ್ ಪಾತ್ರವು ಪ್ರಮುಖವಾಗಿದೆ.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ. ತಮ್ಮ ಬೆಂಬಲಿಗ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ. ಕಾಂಗ್ರೆಸ್‌ನಿಂದ 14 ಮಂದಿ ಶಾಸಕರನ್ನು ಕಳುಹಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದ್ದೇ ಸಿದ್ದರಾಮಯ್ಯ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರನನ್ನು ಗೆಲ್ಲಿಸಲು ಶಿಕಾರಿಪುರದಲ್ಲಿ ಕುರುಬ ಸಮುದಾಯದ ನಾಯಕನಿಗೆ ಟಿಕೆಟ್ ತಪ್ಪಿಸಿದ್ದೇ ಸಿದ್ದರಾಮಯ್ಯ. ಲೋಕಸಭಾ ಚುನಾವಣೆಯಲ್ಲಿ ನಾನು (ಎಚ್. ವಿಶ್ವನಾಥ್) ಸೋಲಲು ಕೂಡ ಸಿದ್ದರಾಮಯ್ಯ ಕಾರಣ. ಪ್ರತಾಪ್ ಸಿಂಹಗೆ ನೆರವು ನೀಡಿ ನನ್ನ ಸೋಲಿಗೆ ಕಾರಣರಾದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ. ಜಿ. ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯರೇ ಕಾರಣ. ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಲು ಅವರ ಸೋಲಿಗೆ ಕಾರಣರಾದರು. ರಾಜಕೀಯವಾಗಿ ಬೆಳೆಸಿದ ಹೆಚ್.ಡಿ. ದೇವೇಗೌಡರನ್ನು ಧಿಕ್ಕರಿಸಿದ ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ. ಅವರು ಕೃತಜ್ಞತಾಹೀನರಾಗಿದ್ದಾರೆ. ದೇವರಾಜ ಅರಸು ಅವರಿಗೆ ಸರಿಸಮವಾಗಲು ಎಂದಿಗೂ ಸಾಧ್ಯವಿಲ್ಲ.
ಸಿದ್ದರಾಮಯ್ಯಗೆ ಒಳಗೊಂದು ಹೊರಗೊಂದು ಎಂಬಂತೆ ಡಬಲ್ ಸ್ಟ್ಯಾಂಡ್ ಹೊಂದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸುತ್ತೂರು ಶ್ರೀಗಳ ಕಾಲಿಡಿದು, ಚಾಮುಂಡೇಶ್ವರಿ ಬೈ ಎಲೆಕ್ಷನ್‌ನಲ್ಲಿ ಉಡುಪಿ ಮಠದ ಪೀಠಾಧಿಪತಿಗಳ ಕಾಲಿಟ್ಟರು. ಸಿದ್ದರಾಮಯ್ಯ ಕಾಂಗ್ರೆಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ. ಅವರು ತನ್ನ ಸ್ವಾರ್ಥಕ್ಕಾಗಿ ಯಾರ ಜೊತೆಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಡಿ.ಕೆ. ಶಿವಕುಮಾರ್ ಕಟ್ಟಾ ಕಾಂಗ್ರೆಸ್ಸಿಗ, ಅವರು ಸಿಎಂ ಆಗಲೇಬೇಕು.
ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ ಎಂದು ಸಿದ್ದರಾಮಯ್ಯ ಚಾಮುಂಡಿ ತಾಯಿ ಮುಂದೆ ನಿಂತು ಹೇಳಲಿ ನೋಡೊಣ. ಚಾಮುಂಡಿ ಬೆಟ್ಟಕ್ಕೆ ಬಂದು 30+30 ತಿಂಗಳು ಅಧಿಕಾರ ಹಂಚಿಕೆ ಆಗಿಲ್ಲ ಎಂದು ಆಣೆ ಮಾಡಲಿ. ನಾನೇ 5 ವರ್ಷ ಸಿಎಂ ಎಂದು ಹೇಳಲಿ ನೋಡೊಣ. ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪಂಥಾಹ್ವಾನ ನೀಡಿದ್ದಾರೆ.
