ಹುಣಸೂರು, ಡಿಸೆಂಬರ್ 20, 2025 : ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಹಣಕಾಸಿನ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಬೈಕ್ ಜಪ್ತಿಯಾಗಲು ಕಾರಣವಾದ ಎಂಬ ಸಿಟ್ಟಿನಲ್ಲಿ ಇಬ್ಬರು ಸ್ನೇಹಿತರು ಸೇರಿ ವ್ಯಕ್ತಿಯೊಬ್ಬನನ್ನು ಮರದ ಪಟ್ಟಿಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಹುಣಸೂರು ನಗರದ ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್ (44) ಕೊಲೆಯಾದ ದುರ್ದೈವಿ. ಇವರು ಆಟೋ ಚಾಲಕ ಹಾಗೂ ಲೋಡರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರಿನ ಮುಸ್ಲಿಂ ಬ್ಲಾಕ್ ನಿವಾಸಿಗಳಾದ ಜಾವಿದ್ ಹಾಗೂ ಇನಾಯತ್ ಉಲ್ಲಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಜಾವಿದ್ ಸ್ಥಳೀಯ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿ ಸಾಲ ಪಡೆದಿದ್ದನು. ಸಾಲ ಮರುಪಾವತಿ ಮಾಡದ ಕಾರಣ ಆ ವ್ಯಕ್ತಿ ಜಾವಿದ್‌ನ ಬೈಕನ್ನು ವಶಕ್ಕೆ ಪಡೆದಿದ್ದನು. ಈ ಬೈಕ್ ಕಿತ್ತುಕೊಳ್ಳುವ ಪ್ರಕ್ರಿಯೆಗೆ ಖಾಜಾಪೀರ್ ಅವರೇ ಪ್ರಚೋದನೆ ನೀಡಿದ್ದಾರೆ ಎಂಬುದು ಜಾವಿದ್‌ನ ಕೋಪಕ್ಕೆ ಕಾರಣವಾಗಿತ್ತು.
ಹುಣಸೂರು ನಗರದ ಮಂಟಿ ಸರ್ಕಲ್ ಬಳಿ. ಗುರುವಾರ ಮಧ್ಯರಾತ್ರಿ.ಬೈಕ್ ವಿಚಾರವಾಗಿ ಮೂವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ಮೂವರೂ ಕುಡಿದ ಮತ್ತಿನಲ್ಲಿದ್ದರು ಎನ್ನಲಾಗಿದೆ.ಗಲಾಟೆ ವಿಕೋಪಕ್ಕೆ ತಿರುಗಿದಾಗ, ಆರೋಪಿಗಳು ಮರದ ರಿಪೀಸ್ ಪಟ್ಟಿಯಿಂದ ಖಾಜಾಪೀರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಖಾಜಾಪೀರ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹುಣಸೂರು ನಗರ ಪೊಲೀಸರು, ಪರಿಶೀಲನೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
