ಮೈಸೂರು, ಫೆಬ್ರವರಿ 27, 2026: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿ ಕ್ರಮವು ಗೊಂದಲದ ಗೂಡಾಗಿದ್ದು, ಇದು ಅಸಂವಿಧಾನಿಕ ಎಂದು ಮಾಜಿ ಶಾಸಕ ಹರ್ಷವರ್ಧನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಯಾದ ಸಮಯದಲ್ಲಿ ರೋಸ್ಟರ್ ಪದ್ಧತಿಯ ಬಗ್ಗೆ ಯಾರಿಗೂ ಸ್ಪಷ್ಟ ಅರಿವಿರಲಿಲ್ಲ. ಹುಬ್ಬಳ್ಳಿ-ಧಾರವಾಡ ವಿಶ್ವವಿದ್ಯಾಲಯದಲ್ಲಿ ಈ ಪದ್ಧತಿಯನ್ನು ಅಳವಡಿಸಿದಾಗ ಅದರ ಅಡ್ಡಪರಿಣಾಮಗಳು ಎಲ್ಲರಿಗೂ ಆಶ್ಚರ್ಯ ಮೂಡಿಸಿವೆ ಎಂದು ತಿಳಿಸಿದರು.
ಮಾದಿಗ ಸಮುದಾಯಕ್ಕೆ ಪ್ರವರ್ಗ ‘ಎ’ ನೀಡಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ನಮ್ಮನ್ನು ಒಂಬತ್ತನೇ ಸ್ಥಾನಕ್ಕೆ ಸೇರಿಸಿರುವುದು ಯಾವ ಮಾನದಂಡದ ಮೇಲೆ ಎಂಬುದು ತಿಳಿಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಪ್ರಸ್ತುತ ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತವಾಗಿರುವ ಈ ಮೀಸಲಾತಿ ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗಲಿದೆ. ಆದರೆ, ಈ ಜಾರಿಗೆ ಆಧಾರವಾಗಿರುವ ನಾಗಮೋಹನ್ ದಾಸ್ ವರದಿ ಅಪೂರ್ಣವಾಗಿದ್ದು, ಸಂವಿಧಾನಕ್ಕೆ ವಿರುದ್ಧವಾಗಿದೆ. ಸರ್ಕಾರದ ಬಳಿ ಪೂರ್ಣ ಪ್ರಮಾಣದ ದತ್ತಾಂಶ (Data) ಇಲ್ಲದಿದ್ದರೂ ಇದನ್ನು ಜಾರಿ ಮಾಡಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ ಹರ್ಷವರ್ಧನ್, ಒಳ ಮೀಸಲಾತಿ ಹೆಸರಿನಲ್ಲಿ ಸರ್ಕಾರ ದಲಿತ ಸಮುದಾಯಗಳಲ್ಲೇ ಒಡಕು ಮೂಡಿಸಿದೆ ಎಂದು ಆರೋಪಿಸಿದರು. “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ದಲಿತ ಮುಖ್ಯಮಂತ್ರಿ ಕನಸು ಕನಸಾಗಿಯೇ ಉಳಿದಿದೆ. ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಅವರು ದೂರದೃಷ್ಟಿಯಿಂದಲೇ ಈ ಹಿಂದೆ ಒಳ ಮೀಸಲಾತಿ ಜಾರಿ ಕಷ್ಟ ಎಂದು ಹೇಳಿದ್ದರು,” ಎಂದು ನೆನಪಿಸಿದ ಅವರು, ಪ್ರಸ್ತುತ ಉದ್ಭವಿಸಿರುವ ಗೊಂದಲಗಳ ಹಿನ್ನೆಲೆಯಲ್ಲಿ ಹಳೆಯ ರೋಸ್ಟರ್ ಪದ್ಧತಿಯನ್ನೇ ಮುಂದುವರಿಸುವುದು ಸೂಕ್ತ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
