ಮೈಸೂರು, ಜನವರಿ 17,2026 : ಮೈಸೂರು ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ನಗರದಲ್ಲಿ ಇತ್ತೀಚೆಗೆ ನಡೆಸಲಾದ ಫಿಟ್ ಮೈಸೂರು ವಾಕಥಾನ್‌ಗೆ ಅಭೂತಪೂರ್ವ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ವಾಕಥಾನ್ ಯಶಸ್ಸಿಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಫಿಟ್ ಮೈಸೂರು ವಾಕಥಾನ್ ಆಯೋಜನೆ ಹಾಗೂ ಅದರ ಯಶಸ್ಸಿಗೆ ಎಲ್ಲಾ ರೀತಿಯಲ್ಲೂ ಸಹಕರಿಸಿದ ಹಲವು ಪ್ರಮುಖರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಅವರು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಕೆ.ಲೋಕನಾಥ್, ಮೈಸೂರು ನಗರವನ್ನು ಸ್ವಚ್ಛ, ಹಸಿರು ಹಾಗೂ ಸಮರ್ಥ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಫಿಟ್ ಮೈಸೂರು ವಾಕಥಾನ್ ಮೂಲಕ ಮೊದಲ ಹೆಜ್ಜೆ ಇರಿಸಿದ್ದು, ಇದೇ ಪ್ರಥಮ ಬಾರಿಗೆ ಮೈಸೂರು ವಿವಿ ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ಇಂತಹದೊಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ. ಮುಂದೆ ಹಸಿರು ಮೈಸೂರು, ಜೂ.21ಕ್ಕೆ ಯೋಗ ಮೈಸೂರು ಸೇರಿದಂತೆ ಮೈಸೂರು ವಿವಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಸನ್ನದ್ಧವಾಗಿದೆ ಎಂದು ಹೇಳಿದರು.
ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ಫಿಟ್ ಮೈಸೂರು ವಾಕಥಾನ್ ಯಶಸ್ವಿಗೆ ಸಂಘ-ಸಂಸ್ಥೆಗಳೊಂದಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಪ್ರೋತ್ಸಾಹ ಕಾರಣವಾಗಿದ್ದು, ಪ್ರಕೃತಿ ಕೂಡ ನಮಗೆ ಸಾಥ್ ನೀಡಿತು. ಮುಂದೆಯೂ ಈ ದಿನಗಳಲ್ಲೂ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಮೈಸೂರಿನಲ್ಲಿ ಶುಚಿ, ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಹಲವು ವರ್ಷಗಳ ಕನಸನ್ನು ಫಿಟ್ ಮೈಸೂರು ವಾಕಥಾನ್ ಮೂಲಕ ಮೈಸೂರು ವಿಶ್ವವಿದ್ಯಾನಿಲಯ ನನಸಾಗಿದೆ ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಫಿಟ್ ಮೈಸೂರು ಯಶಸ್ವಿಯಾಗಿದ್ದು, ಜನರ ಆರೋಗ್ಯ ಕಾಪಾಡುವ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಎಸ್. ನಾಗರಾಜು, ಜಿಮ್ ಅಸೋಸಿಯೇಷನ್‌ನ ಹರ್ಷ, ಜಿಎಸ್‌ಎಸ್ ಸಂಸ್ಥೆಯ ಶ್ರೀರಾಮ್, ಮೈಸೂರು ವಿವಿಯ ವಿವಿಧ ವಿಭಾಗದ ನಿರ್ದೇಶಕರಾದ ಜ್ಯೋತಿ, ಅಮೃತೇಶ್, ಮಂಟೇಲಿಂಗಸ್ವಾಮಿ, ಗುರುಲಿಂಗ ಸಿದ್ದಯ್ಯ, ಸಂಘ ಸಂಸ್ಥೆಗಳ ಪ್ರಮುಖರಾದ ಸಮರ್ಥ್, ಶ್ರೀವತ್ಸ ಮಂಜುನಾಥ್, ವೆಂಕಟೇಶ್, ಪ್ರತಿನಿಧಿ ದಿನಪತ್ರಿಕೆ ಪ್ರಧಾನ ಸಂಪಾದಕ ಸಿ.ಕೆ. ಮಹೇಂದ್ರ, ಕಾರ್ಯನಿರ್ವಾಹಕ ಸಂಪಾದಕ ಧರ್ಮಾಪುರ ನಾರಾಯಣ್, ಜಿಎಸ್‌ಎಸ್‌ನ ರೂಪಶ್ರೀ, ಸರಳ ಇತರರಿದ್ದರು.
