ಮೈಸೂರು, ಜನವರಿ 30, 2026:ಮೈಸೂರಿನ ಎನ್.ಆರ್. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕ್ಷೇತ್ರದ ವಿವಿಧೆಡೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ವಾಸ್ತವಿಕ ಮತ್ತು ದಯನೀಯ ಪರಿಸ್ಥಿತಿ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ತನ್ವೀರ್ ಸೇಠ್ ಅವರು ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಹ, ಅವರದೇ ಸಮುದಾಯದ ಜನರು ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ದುರದೃಷ್ಟಕರ ಎಂದು ಸ್ವಾಮಿ ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ, ತಮ್ಮದೇ ಪಕ್ಷದ ಶಾಸಕರಿರುವ ಈ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ ಎಂಬುದು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಇನ್ನು ಅಭಿವೃದ್ಧಿ ಬಗ್ಗೆ ಶಾಸಕರನ್ನು ಪ್ರಶ್ನಿಸಿದರೆ, “ನಾನು ಯಾರಿಗೂ ಓಟು ಹಾಕಿ ಎಂದು ಕೇಳುವುದಿಲ್ಲ, ಆದರೂ ಜನರು ನನ್ನನ್ನು ಗೆಲ್ಲಿಸುತ್ತಿದ್ದಾರೆ” ಎಂಬ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಕ್ಷೇತ್ರದ ಜನರ ಬವಣೆಯನ್ನು ನೀಗಿಸಲು ಸರ್ಕಾರ ಮತ್ತು ಶಾಸಕರು ಕೂಡಲೇ ಗಮನಹರಿಸಬೇಕೆಂದು ಅವರು ಈ ಮೂಲಕ ಒತ್ತಾಯಿಸಿದ್ದಾರೆ.
