ಹುಣಸೂರು, ಫೆಬ್ರವರಿ 11, 2026 : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರ ನಡುವೆ ಗಲಾಟೆ ನಡೆದು, ಕೈ ಕೈ ಮಿಲಾಯಿಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಿಟ್ಟಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಶಿವರಂಜನಿ ಎಂಬುವರ ಮನೆ ಮುಂದೆ ಈ ಗಲಾಟೆ ಸಂಭವಿಸಿದ್ದು, ಜಮೀನು ಮತ್ತು ಮನೆ ವಿಚಾರವಾಗಿ ಸಂಬಂಧಿಕರ ನಡುವೆ ದೀರ್ಘಕಾಲದ ವಿವಾದವಿದೆ ಎನ್ನಲಾಗಿದೆ. ಶಿವರಂಜನಿ ಅವರ ಕುಟುಂಬದ ಜೊತೆಗೆ ಸಂದೇಶ್, ಮಧು, ಸುಬ್ರಹ್ಮಣಿ ಹಾಗೂ ಪುರುಷೋತ್ತಮ್ ಎಂಬುವರ ನಡುವೆ ಈ ಆಸ್ತಿ ಕಲಹ ಏರ್ಪಟ್ಟಿದೆ.
ಈಗಾಗಲೇ ಈ ಜಮೀನಿನ ವಿಚಾರವು ನ್ಯಾಯಾಲಯದಲ್ಲಿದ್ದು, “ಕೋರ್ಟ್ ಆದೇಶವು ನಿಮ್ಮ ಪರವಾಗಿ ಬಂದರೆ ನಾನು ಮನೆ ಮತ್ತು ಜಮೀನನ್ನು ಬಿಟ್ಟುಕೊಡುತ್ತೇನೆ” ಎಂದು ಶಿವರಂಜನಿ ತಿಳಿಸಿದ್ದರು. ಹೀಗಿದ್ದರೂ ಸಹ, ಎದುರಾಳಿಗಳು ಕುಡಿದು ಬಂದು ಬೇಕಂತಲೇ ಗಲಾಟೆ ಮಾಡುತ್ತಿದ್ದಾರೆ. ಕೇಸ್ ಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಮನೆ ಖಾಲಿ ಮಾಡುವಂತೆ ಪೀಡಿಸುತ್ತಾ, ನಮ್ಮನ್ನು ಬದುಕಲು ಬಿಡುತ್ತಿಲ್ಲ ಎಂದು ಶಿವರಂಜನಿ ಗಂಭೀರವಾಗಿ ಆರೋಪಿಸಿದ್ದಾರೆ.
ಗಲಾಟೆಯ ಸಂದರ್ಭದಲ್ಲಿ ಮನೆ ಮುಂದೆ ಇದ್ದ ಹೂಕುಂಡಗಳನ್ನು ಧ್ವಂಸಗೊಳಿಸಲಾಗಿದ್ದು, ಈ ಘಟನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
