ಬೆಂಗಳೂರು, ಜನವರಿ 29, 2026: ರಾಜ್ಯ ರಾಜಧಾನಿಯ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿದ್ದು, ಕೇರಳ ಮೂಲದ 7 ಡ್ರಗ್ ಪೆಡ್ಲರ್ಸ್ ಸೇರಿ ಒಟ್ಟಾರೆ ಹತ್ತು ಮಂದಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಾಗೂ ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು, ಡಾರ್ಕ್‌ವೆಬ್ ಬಳಸಿ ಬೆಂಗಳೂರಿನಾದ್ಯಂತ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಎಂದು ಗುರುತಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಡ್ರಗ್ ಪೆಡ್ಲರ್ಗಳ ಪೈಕಿ ಇಬ್ಬರು ಕರ್ನಾಟಕ, ಮತ್ತೋರ್ವ ಆಂಧ್ರ ಮೂಲದವರಾಗಿದ್ದು, ಉಳಿದ ಎಳು ಜನರು ಕೇರಳದವರಾಗಿದ್ದಾರೆ. ಆರೋಪಿಗಳು ಥೈಲ್ಯಾಂಡ್‌ನಿಂದ ಡ್ರಗ್ಸ್ ತರಿಸಿಕೊಂಡು ಡಾರ್ಕ್‌ವೆಬ್‌ನಲ್ಲಿ ‘ಟೀಂ ಕಲ್ಕಿ’ (Team Kalki) ಎಂಬ ವೆಬ್‌ಸೈಟ್ ಮೂಲಕ ಡ್ರಗ್ಸ್‌ಗಾಗಿ ಆರ್ಡರ್ ಮಾಡುತ್ತಿದ್ದರು. ಥೈಲ್ಯಾಂಡ್‌ನಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬ ವಿಮಾನದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಕಳುಹಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿಗೆ ತಲುಪಿದ ನಂತರ, ಆರೋಪಿಗಳು ನಗರದಾದ್ಯಂತ ಡ್ರಗ್ಸ್ ವಿತರಿಸುತ್ತಿದ್ದರು.
ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ವಿವಿಧ ಪ್ರದೇಶಗಳನ್ನು ಹಂಚಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಮತ್ತು ಪಾರ್ಟಿಗಳಿಗೆ ಬರುವವರೇ ಇವರ ಪ್ರಮುಖ ಗುರಿಗಳಾಗಿದ್ದರು. ಈ ಡ್ರಗ್ ಪೆಡ್ಲರ್‌ಗಳು ಒಂದೇ ತಂಡದ ಭಾಗವಾಗಿದ್ದರೂ ತಾವು ಹಂಚಿಕೊಂಡಿದ್ದ ಪ್ರದೇಶಗಳ ವಿಚಾರದಲ್ಲಿ ಆಗಾಗ ಜಗಳವಾಡುತ್ತಿದ್ದರು. ತಮ್ಮ ವ್ಯಾಪ್ತಿಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ಡ್ರಗ್ಸ್ ಮಾರಾಟಕ್ಕೆ ಹೋದ ಪೆಡ್ಲರ್‌ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಕೂಡ ನಡೆದಿತ್ತು. ಕೆಲವೊಮ್ಮೆ ಕೊಲೆ ಮಾಡುವ ಹಂತದವರೆಗೆ ಅವರ ಜಗಳ ತಲುಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
