ಮೈಸೂರು, ಜನವರಿ 2, 2025 : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಮುಖ್ಯರಸ್ತೆ ಹಾಗೂ ಲೋಕರಂಜನ್ ಮಹಲ್ ರಸ್ತೆಯಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (MUDA) ಸೇರಿದ ಕಟ್ಟಡವನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಬಾರದು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಬಳಕೆಯಾಗಲಿ: ಇಟ್ಟಿಗೆಗೂಡು ನಿವಾಸಿಗಳು ಸರ್ಕಾರಿ ಕಟ್ಟಡದ ಮುಂಭಾಗದಲ್ಲಿ ಜಮಾಯಿಸಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. “ಸರ್ಕಾರಿ ಜಾಗವು ಸಾರ್ವಜನಿಕರ ಆಸ್ತಿ, ಇದನ್ನು ಕೇವಲ ಸಾರ್ವಜನಿಕ ಉದ್ದೇಶಗಳಿಗಾಗಿ ಮಾತ್ರ ಬಳಸಿಕೊಳ್ಳಬೇಕು. ಇಲ್ಲಿ ಯಾವುದೇ ರೀತಿಯ ವ್ಯಾಪಾರೀಕರಣಕ್ಕೆ ಅವಕಾಶ ನೀಡಬಾರದು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಹಿಂದೆ ಈ ಎಂಡಿಎ ಕಟ್ಟಡದಲ್ಲಿ ಸರ್ಕಾರಿ ಶಾಲೆ ಕಾರ್ಯನಿರ್ವಹಿಸುತ್ತಿತ್ತು. ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ, ಈ ಶಾಲೆಯನ್ನು ಬೇರೆ ಖಾಸಗಿ ಶಾಲೆಯೊಂದಿಗೆ ವಿಲೀನಗೊಳಿಸಲಾಗಿತ್ತು. ತದನಂತರ ಇದೇ ಜಾಗದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲು ತೀರ್ಮಾನಿಸಲಾಗಿತ್ತು.
ಆದರೀಗ ಪಾಸ್‌ಪೋರ್ಟ್ ಕೇಂದ್ರದಂತಹ ಸಾರ್ವಜನಿಕ ಸೇವಾ ಘಟಕ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈಗ ಈ ಕಟ್ಟಡವನ್ನು ಖಾಸಗಿ ಸಂಸ್ಥೆಗೆ ನೀಡಲು ಮುಂದಾಗಿರುವುದು ಆಕ್ರೋಶ ತಂದಿದೆ. ಬೆಲೆಬಾಳುವ ಸರ್ಕಾರಿ ಸ್ವತ್ತನ್ನು ಖಾಸಗಿಯವರಿಗೆ ವಹಿಸಿಕೊಡುವ ಮೂಲಕ ಪ್ರಾಧಿಕಾರವು ಸಾರ್ವಜನಿಕ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ಹಾಗೂ ಇದು ಸಾರ್ವಜನಿಕರ ಆಸ್ತಿ. ಇಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕಚೇರಿ ಅಥವಾ ಕೇಂದ್ರಗಳು ಬರಬೇಕೇ ಹೊರತು, ಖಾಸಗಿ ಲಾಭಕೋರರಿಗೆ ಈ ಜಾಗ ಬಿಟ್ಟುಕೊಡಬಾರದು ಎಂದು ಪ್ರತಿಭಟನಾ ನಿರತ ಇಟ್ಟಿಗೆಗೂಡು ನಿವಾಸಿಗಳು ಆಗ್ರಹಿಸಿದ್ದಾರೆ.
ಪ್ರಾಧಿಕಾರವು ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
