ಮೈಸೂರು, ಜನವರಿ 31, 2026 : ಹುಣಸೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಜಿ.ಡಿ. ಹರೀಶ್ ಗೌಡ ಅವರು ತಮ್ಮ 39ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮವನ್ನು ಮೈಸೂರು ಮತ್ತು ಹುಣಸೂರಿನಾದ್ಯಂತ ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ಮೈಸೂರಿನ ಬೋಗಾದಿಯಲ್ಲಿ ಆಯೋಜಿಸಲಾಗಿದ್ದ ಪ್ರಮುಖ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರು ಭಾಗವಹಿಸಿ, ತಮ್ಮ ನೆಚ್ಚಿನ ನಾಯಕನಿಗೆ ಬೃಹತ್ ಹಾರ ತುರಾಯಿಗಳನ್ನು ಸಮರ್ಪಿಸುವ ಮೂಲಕ ಶುಭಾಶಯ ಕೋರಿದರು. ಶಾಸಕರು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು.
ಈ ಬಾರಿಯ ಹುಟ್ಟುಹಬ್ಬವು ಕೇವಲ ಹಬ್ಬದ ಆಚರಣೆಯಾಗಿ ಉಳಿಯದೆ, ಸಂಪೂರ್ಣವಾಗಿ ಸಾಮಾಜಿಕ ಸೇವಾ ಕಾರ್ಯಗಳಿಗೆ ವೇದಿಕೆಯಾಯಿತು. ಅಭಿಮಾನಿಗಳ ಸಂಘಟನೆಯ ವತಿಯಿಂದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಇದರ ಜೊತೆಗೆ ಬಡ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ತಳ್ಳುವ ಗಾಡಿಗಳು ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಶಾಸಕರ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಒಟ್ಟಾರೆಯಾಗಿ ಸಂಭ್ರಮದ ಆಚರಣೆಯ ಜೊತೆಗೆ ಸಮಾಜಮುಖಿ ಕಾರ್ಯಗಳ ಮೂಲಕ ಜಿ.ಡಿ. ಹರೀಶ್ ಗೌಡರ ಅಭಿಮಾನಿಗಳು ತಮ್ಮ ಅಭಿಮಾನ ಮೆರೆದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜಿ ಡಿ ಹರೀಶ್ ಗೌಡ, ಪ್ರತಿ ವರ್ಷದಂತೆ ಈ ಬಾರಿಯೂ ನನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಸ್ನೇಹಿತರು ಆಪ್ತರು ಅಭಿಮಾನಿಗಳು ಎಲ್ಲರೂ ಸೇರಿಕೊಂಡು ಹುಟ್ಟುಹಬ್ಬ ಆಚರಿಸಿರುವುದರಿಂದ ಸಂತಸವಾಗಿದೆ.ಇದು ನನ್ನ ಸೌಭಾಗ್ಯವಾಗಿದೆ ಎಂದರು. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಹುಟ್ಟು ಹಬ್ಬ ಆಚರಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಳೆದ ಹಲವಾರು ವರ್ಷಗಳಿಂದಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಹುಟ್ಟು ಹಬ್ಬ ಆಚರಿಸುತ್ತಾ ಬಂದಿದ್ದರು. ಹುಣಸೂರು ಕ್ಷೇತ್ರದ ಶಾಸಕನಾದ ಬಳಿಕ ಕಳೆದೆರಡು ವರ್ಷಗಳಿಂದ ಆಚರಿಸಿರಲಿಲ್ಲ. ಆದರೆ ಈ ಬಾರಿ ಆಚರಿಸಲೇ ಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದರು ಹಾಗಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಈ ಬಾರಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಶುಭಾಶಯ ಕೋರಿದ ಫ್ಲೆಕ್ಸ್ ಗಳಲ್ಲಿ ತಂದೆ ಜಿ ಟಿ ದೇವೇಗೌಡರ ಭಾವಚಿತ್ರ ಇಲ್ಲದಿರುವ ವಿಚಾರವಾಗಿ ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಇಂದು ಯಾವುದೇ ರಾಜಕೀಯ ವಿಚಾರ ಮಾತನಾಡುವುದಿಲ್ಲವೆಂದು ನುಡಿದರು.
