ಬೆಂಗಳೂರು , ನವೆಂಬರ್ 12, 2025 : KSRTC ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈಬಸ್ ಇಂದಿನಿಂದ ಹೊಸದೊಂದು ಕೊಡುಗೆಯನ್ನು ಪ್ರಯಾಣಿಕರಿಗೆ ನೀಡುತ್ತಿದೆ.
ವಿವಿಧ ಊರುಗಳಿಂದ ಏರ್ಪೋರ್ಟ್ ಗೆ ಸಂಚರಿಸುವ ಫ್ಲೈ ಬಸ್ ನಲ್ಲಿ ನಂದಿನಿ ಸ್ನ್ಯಾಕ್ ಕಿಟ್ ವಿತರಣೆ ಇಂದಿನಿಂದ ಶುರುವಾಗುತ್ತಿದೆ. ಹೊಸ ಯೋಜನೆಗೆ KIAL ಟರ್ಮಿನಲ್ 2 ರಲ್ಲಿ ಇವತ್ತು ಅಧಿಕೃತ ಚಾಲನೆ ಸಿಗಲಿದೆ. ಜನರ ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸುವುದರ ಜತೆಗೆ ಏರ್ಪೋರ್ಟ್ಗೆ ತೆರಳುವ ಬಸ್ಗಳಲ್ಲೂ ವಿಮಾನ ಪ್ರಯಾಣದ ಮಾದರಿಯಲ್ಲೇ ಆತಿಥ್ಯ ನೀಡಬೇಕೆಂಬ ಗುರಿಯೊಂದಿಗೆ ಇದನ್ನು ಆರಂಭಿಸಲಾಗುತ್ತಿದೆ.
ಕೆಎಸ್‌ಆರ್‌ಟಿಸಿ ಫ್ಲೈಬಸ್ ಸೇವೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೈಸೂರು, ಮಂಗಳೂರು, ಮಡಿಕೇರಿ, ಮಣಿಪಾಲ, ಉಡುಪಿ ಮತ್ತು ಕುಂದಾಪುರ ಸೇರಿದಂತೆ ಕರ್ನಾಟಕದ ಹಲವಾರು ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಎಲ್ಲಾ ಪ್ರೀಮಿಯಂ ಬಸ್ ಗಳಲ್ಲೂ ಈ ಸೇವೆ ಲಭ್ಯವಿರಲಿದೆ.
