ಬೆಂಗಳೂರು, ಡಿಸೆಂಬರ್ 8, 2025 : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಡಿ. 11ರವರೆಗೂ ಕರ್ನಾಟಕದಲ್ಲಿ ವ್ಯಾಪಕ ಮಳೆ ಸುರಿಯಲಿದೆ.
ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಚಳಿ ಹೆಚ್ಚಾಗಿದ್ದು, ಗಢ ಗಢ ಚಳಿ ನಡುವೆ ವರುಣ ಕೂಡ ಕಾಟ ಕೊಡಲಿದ್ದಾನೆ.
ಎಲ್ಲೆಲ್ಲಿ ಮಳೆ..?
ಬೆಳಗಾವಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ, ಬೀದರ್, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಸೂಚನೆ ಹೊರಡಿಸಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ತಾಪಮಾನವೂ ಇಳಿಕೆಯಾಗುವ ನಿರೀಕ್ಷೆಯಿದೆ
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಕನಿಷ್ಠ ತಾಪಮಾನ 17 ರಿಂದ 19 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಸೂಚನೆ ಹೊರಡಿಸಿದೆ.
ಇನ್ನು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
