ಬೆಂಗಳೂರು, ಜನವರಿ 23, 2026:ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವಲ್ಲಿ ಕರ್ನಾಟಕದ ಪಾತ್ರವನ್ನು ಶ್ರುತಪಡಿಸುವ ನಿಟ್ಟಿನಲ್ಲಿ, 2026ರ ಜನವರಿ 26 ರಂದು ನವದೆಹಲಿಯ ‘ಭಾರತ ಪರ್ವ’ದಲ್ಲಿ ನಮ್ಮ ರಾಜ್ಯವು “ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ” ಎಂಬ ಕಲ್ಪನೆಯ ಸ್ತಬ್ಧಚಿತ್ರವನ್ನು ಪ್ರದರ್ಶಿಸುತ್ತಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಿದ್ಧಪಡಿಸಿರುವ ಈ ಸ್ತಬ್ಧಚಿತ್ರವು ಕೃಷಿ ಸಮೃದ್ಧಿ ಮತ್ತು ಆಧುನಿಕ ತಂತ್ರಜ್ಞಾನದ ಸಮನ್ವಯವನ್ನು ಪ್ರತಿನಿಧಿಸುತ್ತದೆ. ಇದರ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ಹಾಗೂ ಸಿರಿಧಾನ್ಯಗಳೊಂದಿಗೆ ರೈತ ಕುಟುಂಬದ ಚಿತ್ರಣವಿದ್ದರೆ, ಮಧ್ಯಭಾಗದಲ್ಲಿ ಅಣು ಮಾದರಿಗಳು, ಕೃತಕ ಬುದ್ಧಿಮತ್ತೆಯ ರೋಬೋಟ್ ಮತ್ತು ಬಾಹ್ಯಾಕಾಶ ಸಂಶೋಧನೆಯ ಸಾಧನೆಗಳನ್ನು ಬಿಂಬಿಸಲಾಗಿದೆ. ಸ್ತಬ್ಧಚಿತ್ರದ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಕರ್ನಾಟಕವು ಮಣ್ಣಿನ ಸಂಸ್ಕೃತಿಯಿಂದ ಮೈಕ್ರೋಚಿಪ್ ಉತ್ಪಾದನೆಯವರೆಗಿನ ಉನ್ನತ ತಂತ್ರಜ್ಞಾನದಲ್ಲಿ ಸಾಧಿಸಿರುವ ಜಾಗತಿಕ ಮೈಲಿಗಲ್ಲನ್ನು ಸಂಕೇತಿಸುತ್ತದೆ.
ಕೇಂದ್ರ ರಕ್ಷಣಾ ಸಚಿವಾಲಯದ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ಕಳುಹಿಸಿದ್ದ ವಿಷಯಗಳಲ್ಲಿ ಈ ಪರಿಕಲ್ಪನೆಯು ಮೊದಲ ಸಭೆಯಲ್ಲಿಯೇ ಒಮ್ಮತದ ಅನುಮೋದನೆ ಪಡೆದಿದೆ. ಕಳೆದ 16 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕವು, ಈ ಹಿಂದೆ ಸಾಂಪ್ರದಾಯಿಕ ಕಸೂತಿ, ಹೊಯ್ಸಳ ವಾಸ್ತುಶಿಲ್ಪ ಮತ್ತು ಬಾಹುಬಲಿಯ ಮಹಾಮಸ್ತಕಾಭಿಷೇಕದಂತಹ ಸ್ತಬ್ಧಚಿತ್ರಗಳ ಮೂಲಕ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರೋತ್ಸಾಹ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ಈ ಸ್ತಬ್ಧಚಿತ್ರವು, ಕರ್ನಾಟಕವನ್ನು ದೇಶದ ಅಗ್ರಗಣ್ಯ ಸ್ಟಾರ್ಟ್‌ಅಪ್ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ದೆಹಲಿಯ ರಾಜಪಥದಲ್ಲಿ ಯಶಸ್ವಿಯಾಗಿ ಅನಾವರಣಗೊಳಿಸಲಿದೆ.
