ಹುಣಸೂರು, ಫೆಬ್ರವರಿ 21, 2026 : ತಾಲ್ಲೂಕಿನ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿ ತಟದಲ್ಲಿ ದಂಡಮ್ಮದೇವಿ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಅಪರೂಪದ ಉತ್ಸವಕ್ಕೆ ಈ ಬಾರಿಯೂ ಅದ್ಧೂರಿ ಚಾಲನೆ ಸಿಕ್ಕಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿಯ ಮೆರವಣಿಗೆ ಹಾಗೂ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಈ ಜಾತ್ರೆಯ ಪ್ರಮುಖ ಆಕರ್ಷಣೆಯೇ ಹರಕೆಯ ಮರಿಗಳನ್ನು ಅರ್ಪಿಸಿ ಗ್ರಾಮಸ್ಥರು ಸಾಮೂಹಿಕವಾಗಿ ಸವಿಯುವ ಭರ್ಜರಿ ಬಾಡೂಟ.

ಈ ಮಹೋತ್ಸವಕ್ಕಾಗಿ ಸಂಕ್ರಾಂತಿ ಹಬ್ಬದಂದೇ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಸಿದ್ಧತೆಗಳನ್ನು ಆರಂಭಿಸಿದ್ದರು. ಹಬ್ಬದ ದಿನದಿಂದಲೇ ಪ್ರತಿ ಮನೆಯಿಂದ ಭತ್ತ ಸೇರಿದಂತೆ ವಿವಿಧ ದವಸ ಧಾನ್ಯಗಳನ್ನು ಸಂಗ್ರಹಿಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಸಂಗ್ರಹಗೊಂಡಿದ್ದ ರಾಶಿ ರಾಶಿ ಭತ್ತವನ್ನು ಅಕ್ಕಿ ಮಾಡಿಸಿ, ಲಕ್ಷಾಂತರ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ ರಾತ್ರಿಯಿಂದಲೇ ಗ್ರಾಮಸ್ಥರು ಬಾಡೂಟದ ತಯಾರಿಯಲ್ಲಿ ತೊಡಗಿದ್ದು, ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ಸುತ್ತಮುತ್ತಲ ಸುಮಾರು 33 ಗ್ರಾಮಗಳ ಜನರು ಒಗ್ಗೂಡಿ ದಂಡಮ್ಮ ದೇವಿಗೆ ಭಕ್ತಿಯ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಜಾತ್ರೆಯ ಪ್ರಯುಕ್ತ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು, ಪ್ರಸಾದ ರೂಪದ ಬಾಡೂಟವನ್ನು ಸವಿದರು. ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಇಡೀ ಗ್ರಾಮವೇ ಹಬ್ಬದ ಕಳೆಗಟ್ಟಿದ್ದು, ಭಕ್ತರ ಜಯಘೋಷಗಳ ನಡುವೆ ದಂಡಮ್ಮ ದೇವಿಯ ಮೆರವಣಿಗೆ ಸಾಗಿತು.
