ಮೈಸೂರು, ನವೆಂಬರ್ 22, 2025 : ಮೈಸೂರು ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಮನುಷ್ಯರ ಮೇಲೆ ಹುಲಿ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 15ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಈ ಭಾರೀ ಸೆರೆ ಕಾರ್ಯಾಚರಣೆಯ ಪರಿಣಾಮವಾಗಿ, ಮೈಸೂರಿನ ಹೊರವಲಯದಲ್ಲಿರುವ ಕೂರ್ಗಳ್ಳಿಯ ವನ್ಯಜೀವಿಗಳ ಪುನರ್ವಸತಿ ಕೇಂದ್ರ (Wildlife Rescue Centre) ಸಂಪೂರ್ಣವಾಗಿ ಭರ್ತಿಯಾಗಿದೆ.
ಸಾಮಾನ್ಯವಾಗಿ ಸೆರೆ ಹಿಡಿದ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರುವ ಕೂರ್ಗಳ್ಳಿ ಕೇಂದ್ರವು, ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಹುಲಿ ಮತ್ತು ಚಿರತೆಗಳನ್ನು ಸ್ವೀಕರಿಸಿದ ಕಾರಣದಿಂದಾಗಿ ಎಲ್ಲಾ ಕೊಠಡಿಗಳು ತುಂಬಿ ಹೋಗಿವೆ.
ಸ್ಥಳಾವಕಾಶದ ಕೊರತೆ: ಪ್ರಾಣಿಗಳು ಬೆಂಗಳೂರಿಗೆ ಶಿಫ್ಟ್

ಕೇಂದ್ರದಲ್ಲಿ ಸ್ಥಳಾವಕಾಶದ ಕೊರತೆ ಎದುರಾದ ಕಾರಣ, ಸೆರೆಹಿಡಿದ ಹೆಚ್ಚಿನ ಪ್ರಾಣಿಗಳನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ (Bannerghatta National Park) ರವಾನಿಸಲಾಗಿದೆ. ಹೆಚ್ಚಿನ ಹುಲಿ-ಚಿರತೆಗಳನ್ನು ಸುರಕ್ಷಿತವಾಗಿ ಇರಿಸಲು ಪುನರ್ವಸತಿ ಕೇಂದ್ರದಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ.
ಈ ಕುರಿತು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಅನುಷಾ ಅವರು ಪ್ರತಿನಿಧಿ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಕಾಡಂಚಿನ ಪ್ರದೇಶದಲ್ಲಿ ಹುಲಿಗಳ ಸೆರೆ ಕಾರ್ಯಾಚರಣೆ ಮುಂದುವರೆದರೆ, ಪ್ರಾಣಿಗಳಿಗೆ ಆಶ್ರಯ ನೀಡಲು ಹೆಚ್ಚುವರಿ ಮೂಲಸೌಕರ್ಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
