ಮೈಸೂರು, ಜನವರಿ 29, 2026 :ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಫಿನಾಯಿಲ್ ಘಟಕವೊಂದರ ಮೇಲೆ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಮತ್ತು ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಮಾದಕ ದ್ರವ್ಯ ಜಾಲವೊಂದನ್ನು ಪತ್ತೆಹಚ್ಚಿ ಕೆಲವರನ್ನು ಬಂಧಿಸಿದ್ದರು. ಆ ವೇಳೆ ಬಂಧಿತರು ನೀಡಿದ ಮಾಹಿತಿ ಹಾಗೂ ಗುಜರಾತ್‌ನಲ್ಲಿ ಸಿಕ್ಕಿಬಿದ್ದಿರುವ ಓರ್ವ ಆರೋಪಿಯ ಸುಳಿವು ಆಧರಿಸಿ ಈ ಫಾಲೋ-ಅಪ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.

ಗುಜರಾತ್‌ನಲ್ಲಿ ಬಂಧನಕ್ಕೊಳಗಾಗಿರುವ ವ್ಯಕ್ತಿಯ ಸಂಬಂಧಿ ಗಣಪತ್ ಲಾಲ್ ಎಂಬುವವರು ಹೆಬ್ಬಾಳಿನಲ್ಲಿ ಫಿನಾಯಿಲ್ ಫ್ಯಾಕ್ಟರಿ ನಡೆಸುತ್ತಿದ್ದು, ಇಲ್ಲಿಯೂ ಡ್ರಗ್ಸ್ ತಯಾರಿಕಾ ಲ್ಯಾಬ್ ಇರಬಹುದು ಎಂಬ ಅನುಮಾನದ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯ ವೇಳೆ ಡಿಟರ್ಜೆಂಟ್, ಸೋಡಾ ಮತ್ತು ಉಪ್ಪು ಸೇರಿದಂತೆ ಫಿನಾಯಿಲ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳು ಮಾತ್ರ ಪತ್ತೆಯಾಗಿವೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು, ತಪಾಸಣೆಯ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೊಂದು ಮುನ್ನೆಚ್ಚರಿಕಾ ಕ್ರಮವಾಗಿ ನಡೆದ ತಪಾಸಣೆಯಾಗಿದ್ದು, ಮೈಸೂರು ಪೊಲೀಸರು ಎನ್‌ಸಿಬಿ ಅಧಿಕಾರಿಗಳಿಗೆ ಕೇವಲ ತಾಂತ್ರಿಕ ಸಹಕಾರವನ್ನು ಮಾತ್ರ ನೀಡಿದ್ದಾರೆ ಎಂದು ತಿಳಿಸುವ ಮೂಲಕ ಪ್ರಕರಣದ ಕುರಿತಾದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
