ಬೆಂಗಳೂರು, ಫೆಬ್ರವರಿ 6, 2026 : ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಸಿಎಂ ಸಿದ್ದರಾಮಯ್ಯ ಆಯವ್ಯಯದ ಸಿದ್ಧತೆಯಲ್ಲಿ ಭಾಗಿಯಾಗಲಿದ್ದಾರೆ. ಗುರುವಾರದಿಂದಲೇ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಕುರಿತು ಸರಣಿ ಸಭೆಯನ್ನು ನಡೆಸಿದ್ದು, ಬೆಂಗಳೂರಿನ ಶಕ್ತಿ ಭವನದಲ್ಲಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.
ಈ ಬಾರಿ ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಕುರ್ಚಿ ಕದನದ ಮಧ್ಯೆಯೇ ಸಿಎಂ ಸಿದ್ದು ಬರೋಬ್ಬರಿ 1 ತಿಂಗಳ ಮುಂಚಿತವಾಗಿಯೇ ಬಜೆಟ್ ಗೆ ಸಿದ್ಧತೆ ನಡೆಸಿದ್ದು, ವಿರೋಧಿ ಪಾಳಯಕ್ಕೆ ತಾವೊಬ್ಬ ಪವರ್ ಫುಲ್ ಲೀಡರ್ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಕಾನೂನು, ಕನ್ನಡ ಮತ್ತು ಸಂಸ್ಕೃತಿ, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ, ತೋಟಗಾರಿಕೆ, ಪ್ರವಾಸೋದ್ಯಮ, ಗಣಿ ಮತ್ತು ಭೂವಿಜ್ಞಾನ, ಕಾರ್ಮಿಕ, ಒಳಾಳಡಿತ, ಹಿಂದುಳಿದ ವರ್ಗಗಳ ಕಲ್ಯಾಣ, ಉನ್ನತ ಶಿಕ್ಷಣ ಇಲಾಖೆ ಜೊತೆ ಸಭೆ ಸಿಎಂ ಹೈ ವೋಲ್ಟೇಜ್ ಮೀಟಿಂಗ್ ನಡೆಸಲಿದ್ದು, ಇಲಾಖಾವಾರು ಅನುದಾನ ಹಂಚಿಕೆ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.
ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಅಹಿಂದ ವರ್ಗಕ್ಕೆ ಬಂಪರ್ ಸಿಗಲಿದೆ ಎಂಬ ಚರ್ಚೆಗಳು ಈಗಾಗಲೇ ಶುರುವಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸಿಎಂ ಆಯವ್ಯಯಕ್ಕೆ ಸಿದ್ಧತೆ ನಡೆಸಿದ್ದು, ಅನುದಾನ ಘೋಷಣೆ ಸಂಬಂಧ ತಜ್ಞರ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
