ಮೈಸೂರು, ಡಿಸೆಂಬರ್ 22, 2025 : ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆ ಹಾಗೂ ಸಚಿವ ರಾಜಣ್ಣ ಅವರ ಭೇಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇಂದು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ.
ಹೈಕಮಾಂಡ್ ಅಂಗಳಕ್ಕೆ ಚೆಂಡು: ಎಲ್ಲದಕ್ಕೂ ಅವರೇ ಅಂತಿಮ
“ನಾನು ಎಲ್ಲವನ್ನೂ ಒಮ್ಮೆಲೇ ಸ್ಪಷ್ಟಪಡಿಸುತ್ತಿದ್ದೇನೆ ಕೇಳಿ, ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಸಿಎಂ ಹೇಳಿದರು. ಈ ಕುರಿತು ಈಗಾಗಲೇ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ ಮತ್ತು ಅವರು ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು ಎಂದು ತಿಳಿಸಿದರು.ಅಧಿವೇಶನದಲ್ಲಿ ಮಾತನಾಡಿದ ಮೇಲೂ ಮಾಧ್ಯಮದವರು ಈ ವಿಚಾರವನ್ನು ಯಾಕೆ ಪದೇ ಪದೇ ಚರ್ಚೆ ಮಾಡುತ್ತಿದ್ದೀರಾ? ಎಂದು ಸಿಎಂ ಪ್ರಶ್ನಿಸಿದರು. ಹಾಗೂ ಸಚಿವ ಕೆ.ಎನ್. ರಾಜಣ್ಣ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನಿಲ್ಲ. ಅವರು ನಮ್ಮ ಪಕ್ಷದ ಅಧ್ಯಕ್ಷರು, ಅವರನ್ನು ಭೇಟಿ ಮಾಡಬಾರದು ಎಂದು ಎಲ್ಲೂ ಇಲ್ಲ ಎಂದು ಸಮರ್ಥಿಸಿಕೊಂಡರು.
ವ್ಯಕ್ತಿಗಿಂತ ಪಕ್ಷ ದೊಡ್ಡದು: ಖರ್ಗೆ ಹೇಳಿಕೆಗೆ ಸಹಮತ
ಮಲ್ಲಿಕಾರ್ಜುನ ಖರ್ಗೆ ಅವರ “ವ್ಯಕ್ತಿಗಿಂತ ಪಕ್ಷ ದೊಡ್ಡದು” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, “ಖರ್ಗೆಯವರು ಹೇಳಿರುವುದು ನೂರಕ್ಕೆ ನೂರು ಸರಿ. ನಾವು ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದೇವೆ,” ಎಂದರು. ಆದರೆ, ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂಬ ಖರ್ಗೆ ಅವರ ಸಲಹೆಗೆ ಪರೋಕ್ಷವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಸಿಎಂ, ಯಾವುದೇ ಸಮಸ್ಯೆ ಇದ್ದರೂ ಅದನ್ನು ಹೈಕಮಾಂಡ್ ಬಗೆಹರಿಸುತ್ತದೆ ಎಂದು ಹೇಳುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದರು.
ಡಿ.ಕೆ. ಶಿವಕುಮಾರ್‌ಗೆ ಟಾಂಗ್
ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ನಾನೇ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, “ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ಅಂದಿನ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ,” ಎಂದು ನೆನಪಿಸುವ ಮೂಲಕ ಟಾಂಗ್ ನೀಡಿದರು.
ದ್ವೇಷ ಭಾಷಣ ತಡೆ ಕಾಯ್ದೆ: ಬಿಜೆಪಿಗೆ ಕುಟುಕು
ದ್ವೇಷ ಭಾಷಣ ತಡೆ ಕಾಯ್ದೆಗೆ ಬಿಜೆಪಿಯ ವಿರೋಧದ ಬಗ್ಗೆ ಮಾತನಾಡುತ್ತಾ, “ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?” ಎಂದು ವ್ಯಂಗ್ಯವಾಡಿದರು.ಈ ಕಾಯ್ದೆ ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ, ಎಲ್ಲರಿಗೂ ಅನ್ವಯವಾಗುತ್ತದೆ.ಬಿಜೆಪಿಯವರು ಹೆಚ್ಚು ದ್ವೇಷ ಭಾಷಣ ಮಾಡುತ್ತಿರಬಹುದು, ಹಾಗಾಗಿ ಅವರು ವಿರೋಧಿಸುತ್ತಿದ್ದಾರೆ.ರಾಜ್ಯದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಈ ಕಾಯ್ದೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಸಂಕ್ರಾಂತಿ ಕ್ರಾಂತಿ ಇಲ್ಲ!
ಸಂಕ್ರಾಂತಿಯ ನಂತರ ಸರ್ಕಾರದಲ್ಲಿ ಬದಲಾವಣೆ ಅಥವಾ ‘ಕ್ರಾಂತಿ’ ಆಗುತ್ತದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಸಿಎಂ, “ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಪುನರುಚ್ಚರಿಸಿದರು.
