ಬೆಂಗಳೂರು, ಡಿಸೆಂಬರ್ 2, 2025 : ಸಿಎಂ ಸಿದ್ದರಾಮಯ್ಯ ಇಂದು ಉಪಹಾರ ಸವಿಯಲು ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಆಗಮಿಸಿದ ಕೂಡಲೇ ಡಿಕೆಶಿ ಹೂಗುಚ್ಚ ನೀಡಿ ಸ್ವಾಗತಿಸಿದರು.

ಕಾವೇರಿ ನಿವಾಸದಿಂದ ಒಬ್ಬರೇ ಹೊರಟ ಸಿಎಂ ಬೆಳಗ್ಗೆ 9:40 ರ ವೇಳೆಗೆ ಡಿಕೆಶಿಯ ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಕುಣಿಗಲ್ ರಂಗನಾಥ್, ಹಾಗೂ ಡಿ ಕೆ ಸುರೇಶ್ ಅವರು ಸಿಎಂ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿದರು. ಆರಂಭದಲ್ಲಿ ಸಿಎಂ ಜೊತೆ ಕೆಲ ಶಾಸಕರು ಡಿಕೆಶಿ ಮನೆಗೆ ಬರಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಸಿಎಂ ಜೊತೆ ಬೇರೆ ಶಾಸಕರು ಆಗಮಿಸಲಿಲ್ಲ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಸದಾಶಿವನಗರದ ಡಿಕೆಶಿ ಅವರ ಮನೆ ಮುಂದಿನ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ.
ಸಿದ್ದರಾಮಯ್ಯನವರಿಗೆ ನಾಟಿ ಕೋಳಿ ಇಷ್ಟ ಎನ್ನುವ ಕಾರಣಕ್ಕೆ ಬೆಳಗ್ಗಿನ ತಿಂಡಿಗೆ ನಾಟಿ ಕೋಳಿ ಸಾರಿನ ಆತಿಥ್ಯ ನೀಡಲು ಡಿಕೆಶಿ ಮುಂದಾಗಿದ್ದಾರೆ. ಬೆಳಗ್ಗೆ ತಿಂಡಿಗೆ ಇಡ್ಲಿ ನಾಟಿ ಕೋಳಿ ಸಾರು ಹಾಗೂ ನಾಟಿಕೋಳಿ ಫ್ರೈ ಸ್ಪೆಷಲ್ ಮೆನು ಸಿದ್ಧಪಡಿಸಲಾಗಿದೆ. ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ಕನಕಪುರದ ನಾಟಿ ಕೋಳಿಯನ್ನೇ ಸಿಎಂಗೆ ಉಣಬಡಿಸಲಾಗಿದೆ.
