ಮೈಸೂರು, ಮಾರ್ಚ್ 5, 2026 : ಕಳೆದ ನವೆಂಬರ್‌ನಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಬಳಿ ನಾಲೆಗೆ ಬಿದ್ದು ಮೃತಪಟ್ಟಿದ್ದ ನಾಲ್ವರು ವಿದ್ಯಾರ್ಥಿನಿಯರ ಕುಟುಂಬಗಳಿಗೆ ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳ ಚೆಕ್ ವಿತರಿಸಲಾಯಿತು.
ಮೈಸೂರಿನ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಮೃತರ ಪೋಷಕರಿಗೆ ಈ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಕಳೆದ ನವೆಂಬರ್ 1ರಂದು ಮೈಸೂರಿನ ಉದಯಗಿರಿಯ ಮದರಸಾದಿಂದ ಶಾಲಾ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಆಯಿಷಾಬಾನು, ಉಮ್ಮೇಹನಿ, ಸಾಲಿಯಾ ತರ್ವಿನ್ ಮತ್ತು ಅಫ್ರೀನ ಎಂಬ ವಿದ್ಯಾರ್ಥಿನಿಯರು ನೀರಿಗಿಳಿದಾಗ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದರು. ಮೃತಪಟ್ಟವರೆಲ್ಲರೂ ಅತ್ಯಂತ ಬಡ ಕುಟುಂಬದವರಾಗಿದ್ದರಿಂದ, ಶಾಸಕ ತನ್ವೀರ್ ಸೇಠ್ ಅವರು ಸರ್ಕಾರಕ್ಕೆ ಮನವಿ ಮಾಡಿ ವಿಶೇಷ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ನಾಲ್ಕು ತಿಂಗಳ ಬಳಿಕ ಈ ಆರ್ಥಿಕ ನೆರವು ಸಂತ್ರಸ್ತ ಕುಟುಂಬಗಳಿಗೆ ತಲುಪಿದೆ.
ಪರಿಹಾರದ ಚೆಕ್ ಸ್ವೀಕರಿಸುವ ವೇಳೆ ಮಕ್ಕಳನ್ನು ನೆನೆದು ಪೋಷಕರು ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, “ಈ ಘಟನೆ ನಡೆಯಬಾರದಿತ್ತು, ಆದರೆ ವಿಧಿಯಾಟದ ಮುಂದೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಪೋಷಕರು ಕಡು ಬಡವರಾಗಿದ್ದು, ಅವರಿಗೆ ನೆರವಾಗುವ ನಿಟ್ಟಿನಲ್ಲಿ ರಂಜಾನ್ ಸಂದರ್ಭದಲ್ಲಿ ಈ ಸಣ್ಣ ಸಹಾಯ ಮಾಡಿದ್ದೇವೆ” ಎಂದು ತಿಳಿಸಿದರು.
