ಚಾಮರಾಜನಗರ, ಡಿಸೆಂಬರ್ 20, 2025 : ಜಿಲ್ಲೆಯ ಗಡಿಭಾಗದ ಗ್ರಾಮಸ್ಥರಲ್ಲಿ ಈಗ ಎದೆನಡುಕ ಶುರುವಾಗಿದೆ. ಸದಾ ಒಂದಲ್ಲಾ ಒಂದು ಕಾಡುಪ್ರಾಣಿಗಳ ಉಪಟಳದಿಂದ ಸುದ್ದಿಯಾಗುತ್ತಿದ್ದ ಚಾಮರಾಜನಗರ ತಾಲೂಕಿನಲ್ಲಿ ಈಗ ಒಟ್ಟಿಗೆ ಐದು ಹುಲಿಗಳು ಕಾಣಿಸಿಕೊಂಡಿರುವುದು ಜನರನ್ನು ಆತಂಕದ ಮಡುವಿಗೆ ದೂಡಿದೆ.
ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಕುಮಾರಸ್ವಾಮಿ ಎಂಬುವವರ ಜಮೀನಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ.

ಸಾಮಾನ್ಯವಾಗಿ ಹುಲಿಗಳು ಒಂಟಿಯಾಗಿ ಓಡಾಡುತ್ತವೆ. ಆದರೆ ಇಲ್ಲಿ ಅಚ್ಚರಿ ಎಂಬಂತೆ, ಒಂದರ ಹಿಂದೆ ಒಂದರಂತೆ ಒಟ್ಟು 5 ಹುಲಿಗಳು ಜಮೀನಿನ ಹಾದಿಯಲ್ಲಿ ರಾಜಾರೋಷವಾಗಿ ನಡೆದು ಹೋಗಿವೆ. ತಡರಾತ್ರಿ ಜಮೀನಿಗೆ ನುಗ್ಗಿರುವ ಈ ಹುಲಿಗಳ ದಂಡು, ಆಹಾರ ಅರಸಿ ಬಂದಿರುವ ಸಾಧ್ಯತೆ ಇದೆ. ಈ ದೃಶ್ಯ ಲಭ್ಯವಾಗುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೊಲ-ಗದ್ದೆಗಳಿಗೆ ಹೋಗಲು ಭಯಪಡುತ್ತಿದ್ದಾರೆ.”ನಮ್ಮ ಜಮೀನಿನ ಸಿಸಿಟಿವಿ ದೃಶ್ಯ ನೋಡಿ ನಾವೇ ಶಾಕ್ ಆಗಿದ್ದೇವೆ. ಒಟ್ಟಿಗೆ ಐದು ಹುಲಿಗಳನ್ನು ನೋಡುವುದೆಂದರೆ ಸಾಮಾನ್ಯ ವಿಷಯವಲ್ಲ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ನಮಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.
ಗ್ರಾಮದ ಜನವಸತಿ ಪ್ರದೇಶದ ಸಮೀಪವೇ ಇಷ್ಟೊಂದು ಸಂಖ್ಯೆಯಲ್ಲಿ ಹುಲಿಗಳು ಕಾಣಿಸಿಕೊಂಡಿರುವುದರಿಂದ ರೈತರು ಜಮೀನಿಗೆ ಹೋಗಲು ಮತ್ತು ಜಾನುವಾರುಗಳನ್ನು ಮೇಯಿಸಲು ಹಿಂಜರಿಯುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಹುಲಿಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ನಂಜದೇವನಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
