ಮೈಸೂರು, ಫೆಬ್ರವರಿ 5, 2026: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಿಗ್‌ಬಾಸ್ ಖ್ಯಾತಿಯ ರಜತ್, ಈಗ ಮೈಸೂರಿನ ಪಾರಂಪರಿಕ ಕಟ್ಟಡದ ಆವರಣದಲ್ಲಿ ನಡೆಸಿದ ಫೋಟೋಶೂಟ್ ಮೂಲಕ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ‘ವಿಲನ್’ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರ ಎಂಬ ನಿಯಮವಿದ್ದರೂ, ಪಾರಂಪರಿಕ ಕಟ್ಟಡದ ಬಳಿಯೇ ಈ ರೀತಿ ವರ್ತಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಅಲ್ಲದೆ, ಇಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಾಗ ಕಡ್ಡಾಯವಾಗಿ ಹಾಕಬೇಕಾದ “ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ” ಎಂಬ ಎಚ್ಚರಿಕೆಯ ಸಂದೇಶವನ್ನೂ ರಜತ್ ನೀಡಿಲ್ಲ. ಈ ಹಿಂದೆ ಶೂಟಿಂಗ್ ಸೆಟ್‌ನಲ್ಲಿ ಮಚ್ಚು ಹಿಡಿದು ಫೋಟೋಶೂಟ್ ಮಾಡಿ ಜೈಲು ಪಾಲಾಗಿದ್ದ ರಜತ್, ಜಾಮೀನಿನ ಮೇಲೆ ಹೊರಬಂದಿದ್ದರೂ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. “ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯಲಿಲ್ಲವೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
