ಮೈಸೂರು, ಡಿಸೆಂಬರ್ 17, 2025 : ಸಾಲಕ್ಕಾಗಿ ನಂಬಿಕೆಯಿಂದ ಬ್ಯಾಂಕ್‌ನಲ್ಲಿ ಚಿನ್ನ ಅಡಮಾನ ಇಟ್ಟಿದ್ದ ಗ್ರಾಹಕರಿಗೆ ಸ್ವತಃ ಬ್ಯಾಂಕ್‌ನಿಂದಲೇ ಮೋಸವಾಗಿರುವ ಗಂಭೀರ ಆರೋಪವೊಂದು ಮೈಸೂರಿನ ಹಿನಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೇಳಿಬಂದಿದೆ.
ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು ಮನೆಗೆ ಹೋಗಿ ಪರಿಶೀಲಿಸಿದಾಗ ಒಡವೆಯ ಸ್ವರೂಪವೇ ಬದಲಾಗಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಆಕ್ರೋಶಗೊಂಡ ನೂರಕ್ಕೂ ಹೆಚ್ಚು ಗ್ರಾಹಕರು ಇಂದು ಬ್ಯಾಂಕ್‌ಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಹಕರೊಬ್ಬರು ತಮ್ಮ ಚಿನ್ನದ ಸರವನ್ನು ಬಿಡಿಸಿಕೊಂಡು ಹೋಗಿ ಧರಿಸಲು ಪ್ರಯತ್ನಿಸಿದಾಗ ಅದು ಸರಿಯಾಗಿ ಹೊಂದಿಕೆಯಾಗದ ಕಾರಣ ಅನುಮಾನಗೊಂಡು ಪರಿಶೀಲಿಸಿದ್ದಾರೆ. ಅಡಮಾನ ಇಟ್ಟ ಸಂದರ್ಭದಲ್ಲಿ 81 ಚಿನ್ನದ ಗುಂಡುಗಳಿದ್ದ ಸರದಲ್ಲಿ, ವಾಪಸ್ ಪಡೆದಾಗ ಕೇವಲ 73 ಗುಂಡುಗಳು ಮಾತ್ರ ಇರುವುದು ಕಂಡುಬಂದಿದೆ. ಅಚ್ಚರಿಯ ವಿಷಯವೆಂದರೆ ಚಿನ್ನದ ಒಟ್ಟು ತೂಕದಲ್ಲಿ ವ್ಯತ್ಯಾಸವಿಲ್ಲದಿದ್ದರೂ, ಒಡವೆಯಲ್ಲಿದ್ದ ಮೌಲ್ಯಯುತ ಭಾಗಗಳನ್ನು ಬದಲಿಸಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ಸೇರಿಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಈ ವಿಚಾರ ತಿಳಿಯುತ್ತಿದ್ದಂತೆ ನೂರಾರು ಗ್ರಾಹಕರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಗಲಾಟೆ ನಡೆಸಿದ್ದು, ತಮ್ಮ ಅಸಲಿ ಚಿನ್ನವನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದರು.
ಘಟನಾ ಸ್ಥಳಕ್ಕೆ ವಿಜಯನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ್ ಅವರು, ಬ್ಯಾಂಕ್‌ನಲ್ಲಿ ಇಂತಹ ಮೋಸ ನಡೆಯಲು ಸಾಧ್ಯವಿಲ್ಲ ಮತ್ತು ಗ್ರಾಹಕರ ಹಿತವೇ ನಮಗೆ ಮುಖ್ಯ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸಲಾಗುವುದು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಚಿನ್ನದ ಮೌಲ್ಯಮಾಪನ ಮಾಡುತ್ತಿದ್ದ ಅಕ್ಕಸಾಲಿಗ ಅಶ್ವಿನ್ ವಿರುದ್ಧ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಒಂದು ವೇಳೆ ತಪ್ಪು ಸಾಬೀತಾದರೆ ಬ್ಯಾಂಕ್ ನಿಯಮಗಳಂತೆ ಗ್ರಾಹಕರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ.
