ಅಮೆರಿಕ, ಡಿಸೆಂಬರ್ 18, 2025 : ಇತ್ತೀಚಿನ ಕೆಲ ತಿಂಗಳಿಂದ ಬರೀ ಕಾಂಟ್ರವರ್ಸಿ ಮುಲಾಕವೇ ಹೆಚ್ಚು ಸುದ್ದಿಯಾಗಿರೋ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಳ್ಳೆ ಕಾರಣಕ್ಕೆ ದೊಡ್ಡ ಸುದ್ದಿಯಲ್ಲಿದ್ದಾರೆ.
ತನ್ನ ಹುಚ್ಚುತನದ ವಲಸೆ ನೀತಿ ಹಾಗೂ ನಿರಂತರವಾಗಿ ಟ್ಯಾಕ್ಸ್ ಹೇರಿಕೆಯಿಂದ ಹೆಚ್ಚು ಅಪಖ್ಯಾತಿ ಪಡೆದಿರೋ ಡೋನಾಲ್ಡ್ ಟ್ರಂಪ್, ಈ ಬಾರಿ ಅಮೇರಿಕದ ಹೆಮ್ಮೆಯ ಸೈನಿಕರ ಪರ ನಿಂತಿದ್ದಾರೆ. ದೇಶ ಕಾಯುವ ಸೇನೆಗೆ ಕ್ರಿಸ್ಮಸ್ ಹಬ್ಬಕ್ಕೂ ಮುನ್ನವೇ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಅಮೆರಿಕದ ಸ್ಥಾಪನಾ ವರ್ಷಾಚರಣೆ ಹಿನ್ನೆಲೆ ʻವಾರಿಯರ್ ಡಿವಿಡೆಂಡ್ʼ ಭಾಗವಾಗಿ ಪ್ರತಿ ಅಮೆರಿಕನ್ ಸೈನಿಕರಿಗೆ 1,776 ಡಾಲರ್ ಅಂದ್ರೆ ಸುಮಾರು 1.60 ಲಕ್ಷ ರೂ. ವಿಶೇಷ ನಗದು ಪಾವತಿಸುವುದಾಗಿ ಘೋಷಿಸಿದ್ದಾರೆ. ಟ್ರoಪ್ ನಿರ್ಧಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಹೀಗಾಗಿ ಅಮೆರಿಕ ದೇಶಾದ್ಯಂತ ಇರುವ 14.5 ಲಕ್ಷ ಸೈನಿಕರು ಕ್ರಿಸ್‌ಮಸ್‌ಗೆ ಮುನ್ನವೇ ತಲಾ 1.60 ಲಕ್ಷ ರೂ. ನೆರವು ಪಡೆಯಲಿದ್ದಾರೆ. ಇದು ಅವರ ತ್ಯಾಗ ಮತ್ತು ಸೇವೆಗೆ ನೀಡುವ ಪ್ರೋತ್ಸಾಹವಾಗಿದೆ.
2025ರ ನವೆಂಬರ್ 30ಕ್ಕೆ ಅನ್ವಯವಾಗುವಂತೆ 0-6 ಮತ್ತು ಅದಕ್ಕಿಂತ ಕಡಿಮೆ ವೇತನ ಶ್ರೇಣಿಯಲ್ಲಿ ಮತ್ತು ಸಕ್ರಿಯ ಕರ್ತವ್ಯದಲ್ಲಿರುವವರು, ಹಾಗೆಯೇ ನವೆಂಬರ್ 30ಕ್ಕೆ ಅನ್ವಯವಾಗುವಂತೆ 31 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ-ಕರ್ತವ್ಯ ನಿರ್ವಹಿಸಿದ ಮೀಸಲು ಘಟಕ ಸಿಬ್ಬಂದಿ ಒಂದು ಬಾರಿಗೆ ಡಿವಿಡೆಂಡ್ ಪಡೆಯಲಿದ್ದಾರೆ.
ಅಮೆರಿಕದ ಹೊಸ ತೆರಿಗೆ ನೀತಿಯಿಂದ ದೊಡ್ಡಮಟ್ಟಿನ ಆದಾಯ ಹರಿದುಬಂದಿದೆ. ಹೊಸ ಸುಂಕದ ಮಸೂದೆಗಳೊಂದಿಗೆ 14.5 ಲಕ್ಷ ಮಿಲಿಟರಿ ಸಿಬ್ಬಂದಿಗೆ ವಿಶೇಷ ನಗದು ಪಾವತಿ ಘೋಷಿಸಲು ನನಗೆ ಹೆಮ್ಮೆಯಾಗುತ್ತದೆ. ನಮ್ಮ ರಾಷ್ಟ್ರ ಸ್ಥಾಪನೆಯ ಗೌರವಾರ್ಥವಾಗಿ ಪ್ರತಿ ಸೈನಿಕರಿಗೆ ವಾರಿಯರ್ ಡಿವಿಡೆಂಡ್ ಘೋಷಿಸಿದ್ದೇವೆ ಎಂದು ಟ್ರಂಪ್ ಬಣ್ಣಿಸಿದ್ದಾರೆ.
