ನೆಲಮಂಗಲ, ಜನವರಿ 10, 2025 : ಕ್ಷುಲ್ಲಕ ಹಣದ ವಿಚಾರಕ್ಕೆ ದಂಪತಿಗಳ ನಡುವೆ ಉಂಟಾದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ, ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸುಮಾ (30) ಎಂದು ಗುರುತಿಸಲಾಗಿದೆ. ಇವರು ಸುಮಾರು 8 ವರ್ಷಗಳ ಹಿಂದೆ ಚಂದ್ರಶೇಖರ್ ಎಂಬುವವರನ್ನು ಮದುವೆಯಾಗಿದ್ದರು. ಧರ್ಮಸ್ಥಳ ಸ್ವಸಹಾಯ ಸಂಘದ ಸಾಲದ ಕಂತನ್ನು ಪಾವತಿಸಲು ಸುಮಾ ಅವರು ಪತಿಗೆ ತಿಳಿಸದಂತೆ ಮನೆಯಲ್ಲಿ 1,300 ರೂ.ಗಳನ್ನು ಎತ್ತಿಟ್ಟಿದ್ದರು.
ಸುಮಾ ಅವರು ಕೂಡಿಟ್ಟಿದ್ದ 1,300 ರೂ.ಗಳ ಪೈಕಿ ಪತಿ ಚಂದ್ರಶೇಖರ್ ಸಬೂಬು ಹೇಳಿ 200 ರೂ.ಗಳನ್ನು ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಸುಮಾ ಪತಿಯೊಂದಿಗೆ ಶುಕ್ರವಾರ ಸಂಜೆ ಗಲಾಟೆ ನಡೆಸಿದ್ದಾರೆ. ಹಣದ ವಿಚಾರವಾಗಿ ದಂಪತಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಶುಕ್ರವಾರ ಪತಿ ಚಂದ್ರಶೇಖರ್ ಮತ್ತು ಅತ್ತೆ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಪತಿ ಚಂದ್ರಶೇಖರ್ ಊಟಕ್ಕಾಗಿ ಮನೆಗೆ ಬಂದಾಗ ಪತ್ನಿಯ ಸಾವಿನ ವಿಷಯ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸಂಸಾರದಲ್ಲಿ ಉಂಟಾದ ಸಣ್ಣ ಅಸಮಾಧಾನವೊಂದು ಮಹಿಳೆಯೊಬ್ಬರ ಪ್ರಾಣಕ್ಕೆ ಮುಳುವಾಗಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.
