ಮೈಸೂರು, ಮಾರ್ಚ್ 3, 2026 : ಮೈಸೂರಿನ ಪ್ರಸಿದ್ಧ 101 ಗಣಪತಿ ದೇವಸ್ಥಾನದಲ್ಲಿ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಗ್ರಹಣದ ಪ್ರಯುಕ್ತ ಮಧ್ಯಾಹ್ನ 12 ಗಂಟೆಯಿಂದಲೇ ದೇವಸ್ಥಾನದ ಮುಖ್ಯ ದ್ವಾರಗಳನ್ನು ಮುಚ್ಚಲಾಗುತ್ತಿದ್ದು, ಸಂಜೆ 7 ಗಂಟೆಯವರೆಗೆ ಭಕ್ತಾದಿಗಳ ದರ್ಶನಕ್ಕೆ ಸಂಪೂರ್ಣವಾಗಿ ಅವಕಾಶವನ್ನು ನಿರಾಕರಿಸಲಾಗಿದೆ.
ಮೈಸೂರಿನ ಅಗ್ರಹಾರದಲ್ಲಿರುವ ಈ ಐತಿಹಾಸಿಕ ದೇವಸ್ಥಾನವು ಗ್ರಹಣದ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನ ಧಾರ್ಮಿಕ ವಿಧಿವಿಧಾನಗಳನ್ನು ರೂಪಿಸಿಕೊಂಡಿದೆ. ಗ್ರಹಣದ ಅವಧಿಯಲ್ಲಿ ಅಂದರೆ ಸ್ಪರ್ಶ ಕಾಲ, ಮಧ್ಯ ಕಾಲ ಹಾಗೂ ಮೋಕ್ಷ ಕಾಲದಲ್ಲಿ 101 ಗಣಪತಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಅರ್ಚಕರು ಸಜ್ಜಾಗಿದ್ದಾರೆ. ಗ್ರಹಣ ಮುಕ್ತಾಯವಾದ ನಂತರ ಇಡೀ ದೇವಾಲಯದ ಆವರಣವನ್ನು ಶಾಸ್ತ್ರೋಕ್ತವಾಗಿ ಶುದ್ಧಿಗೊಳಿಸಿ, ಸಂಪ್ರದಾಯದಂತೆ ಪುಣ್ಯಾಹ ವಾಚನ ನೆರವೇರಿಸಿದ ಬಳಿಕವಷ್ಟೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ದೇವಸ್ಥಾನದ ಮಂಡಳಿ ತಿಳಿಸಿದೆ.
