ಹುಣಸೂರು, ಡಿಸೆಂಬರ್ 17, 2025 : ನಿಯಂತ್ರಣ ತಪ್ಪಿದ ಆಪೆ ಆಟೋವೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ಮೂಕನಹಳ್ಳಿ ಬಳಿ ನಡೆದಿದೆ.

ಹುಣಸೂರು ತಾಲ್ಲೂಕಿನ ಉದ್ದೂರು ಗ್ರಾಮದ ನಿವಾಸಿ ರಾಜು ಮೃತಪಟ್ಟ ದುರ್ದೈವಿ ಚಾಲಕ. ರಾಜು ಅವರು ತಮ್ಮ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಮೂಕನಹಳ್ಳಿ ಸಮೀಪದ ಕೆರೆಯ ಬಳಿ ವಾಹನದ ಮೇಲಿನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತೀವ್ರ ಕಾರ್ಯಾಚರಣೆ ನಡೆಸಿದರು. ನೀರಿನಲ್ಲಿ ಮುಳುಗಿದ್ದ ಆಟೋ ಹಾಗೂ ಚಾಲಕ ರಾಜು ಅವರ ಶವವನ್ನು ಅಗ್ನಿಶಾಮಕ ದಳದವರು ಯಶಸ್ವಿಯಾಗಿ ಮೇಲೆತ್ತಿದ್ದಾರೆ.
ಸ್ಥಳಕ್ಕೆ ಹುಣಸೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
