ನಂಜನಗೂಡು, ಜನವರಿ 10, 2026: ನಂಜನಗೂಡಿನ ನೀಲಕಂಠ ನಗರದ ದಿವ್ಯ ಎಂಬ ಯುವತಿಯ ಆತ್ಮಹತ್ಯೆ ಪ್ರಕರಣವು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲಿಗೆ ಯುವಕನ ಕಾಟವೇ ಈ ಸಾವಿಗೆ ಕಾರಣ ಎಂದು ಭಾವಿಸಲಾಗಿದ್ದರೂ, ಈಗ ಹೊರಬಂದಿರುವ ಆಡಿಯೋ ಮತ್ತು ಫೋಟೋಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ.

ಮೃತ ಯುವತಿ ದಿವ್ಯ ಮತ್ತು ಆದಿತ್ಯ ಎಂಬ ಯುವಕ ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅವರ ಸೆಲ್ಫಿ ಫೋಟೋಗಳಿಂದ ತಿಳಿದುಬರುತ್ತಿದೆ. ವಿಶೇಷವೆಂದರೆ, ದಿವ್ಯ ತನ್ನನ್ನು ಕರೆದುಕೊಂಡು ಹೋಗುವಂತೆ ಆದಿತ್ಯನಿಗೆ ಮನವಿ ಮಾಡಿರುವ ಆಡಿಯೋ ತುಣುಕು ಈಗ ಲಭ್ಯವಾಗಿದ್ದು, ಇದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ.
ನಂಜನಗೂಡಿನ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿವ್ಯ, ಆದಿತ್ಯನನ್ನು ಲವ್ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಪ್ರೀತಿ ಮಾಡುವಾಗ ಈ ಜೋಡಿ ಚಾಮುಂಡಿಬೆಟ್ಟ ಸೇರಿದಂತೆ ಹಲವು ಕಡೆ ಸುತ್ತಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನಲೆ ನನ್ನನ್ನು ಕರೆದುಕೊಂಡು ಹೋಗುವಂತೆ ಯುವಕನ ಜೊತೆ ದಿವ್ಯ ಮಾತನಾಡಿರುವ ಆಡಿಯೋ ಇದೀಗ ಲಭ್ಯವಾಗಿದೆ.
ಈ ಮಧ್ಯೆ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಆದಿತ್ಯ, ಯುವತಿಯ ಸಾವಿಗೆ ಆಕೆಯ ಪೋಷಕರ ವಿರೋಧ ಮತ್ತು ಮನೆಯಲ್ಲಿನ ಒತ್ತಡವೇ ಕಾರಣ ಎಂದು ಹೇಳಿಕೆ ನೀಡಿದ್ದಾನೆ. ಈ ಸಂಘರ್ಷದ ನಡುವೆ ಸಾವಿಗೆ ನಿಜವಾದ ಕಾರಣ ಯುವಕನ ಕಿರುಕುಳವೋ ಅಥವಾ ಪೋಷಕರ ವಿರೋಧವೋ ಎಂಬ ಗೊಂದಲ ಸೃಷ್ಟಿಯಾಗಿದ್ದು, ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಬೇಕಿದೆ.
