ಮೈಸೂರು, ಫೆಬ್ರವರಿ 11, 2026 : ಜಿಲ್ಲೆಯಾದ್ಯಂತ ಕೆರೆ ಕಟ್ಟೆಗಳಿಗೆ ಕೂಡಲೇ ನೀರು ತುಂಬಿಸುವಂತೆ ಆಗ್ರಹಿಸಿ ಮೈಸೂರಿನ ಕಾಡಾ (CADA) ಕಚೇರಿಗೆ ಮುತ್ತಿಗೆ ಹಾಕಲು ರೈತರು ತೀವ್ರ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳೆಕೆರೆ ಹುಂಡಿ ಭಾಗ್ಯರಾಜ್ ಅವರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತರು, ಸರ್ಕಾರದ ವಿಳಂಬ ನೀತಿಯ ವಿರುದ್ಧ ಆಕ್ರೋಶ ಹೊರಹಾಕಿದರು.

ಬೇಸಿಗೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಜನಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು ನಾಲೆಗಳ ಮೂಲಕ ಕೆರೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯ ವೇಳೆ ಕಾಡಾ ಕಚೇರಿಗೆ ನುಗ್ಗಲು ಯತ್ನಿಸಿದ ರೈತರನ್ನು ಪೊಲೀಸರು ತಡೆದಾಗ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ರೈತರು, ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮುಖ್ಯಮಂತ್ರಿಗಳ ಹಿಂಬಾಲಕರಾಗುವುದನ್ನು ಬಿಟ್ಟು ರೈತರ ಹಿತ ಕಾಯುವತ್ತ ಗಮನಹರಿಸಬೇಕು ಎಂದು ಚುರುಕು ಮುಟ್ಟಿಸಿದರು. ಒಂದು ವೇಳೆ ತಕ್ಷಣವೇ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
