ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಕೆ.ಸಿ. ಲೇಔಟ್‌ನಲ್ಲಿ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಕೆ.ಸಿ. ಲೇಔಟ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುಮಾರು 47 ಎಕರೆ ಜಾಗದ ಪೈಕಿ, ಕುರುಬಾರಹಳ್ಳಿ ಗ್ರಾಮದ ಸರ್ವೇ ನಂಬರ್ 4ಕ್ಕೆ ಸೇರಿದ 3.17 ಎಕರೆ ಕೆರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮುಡಾ ಮಾಸ್ಟರ್ ಪ್ಲಾನ್ ಹಾಗೂ ನಕ್ಷೆಯಲ್ಲಿ ಈ ಜಾಗವು ‘ಕೆರೆ’ ಎಂದು ಸ್ಪಷ್ಟವಾಗಿ ನಮೂದಾಗಿದ್ದರೂ ಸಹ, ಪ್ರಭಾವಿಗಳು ಕೆರೆಯನ್ನು ಮುಚ್ಚಿ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸರ್ಕಾರಿ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿ ಕಟ್ಟಡ ಕಟ್ಟಲು ಮುಂದಾಗಿದ್ದಾರೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಇದು ವಸತಿ ವಲಯವೆಂದು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿ ಪೀಟರ್ ಎಂಬುವವರ ಹೆಸರಿನ ಬೋರ್ಡ್ ಅಳವಡಿಸಲಾಗಿದ್ದು, ಈ ಅಕ್ರಮದ ಹಿಂದೆ ಇರುವ ಅಸಲಿ ಪ್ರಭಾವಿ ವ್ಯಕ್ತಿಗಳು ಯಾರು ಎಂಬುದು ತನಿಖೆಯಾಗಬೇಕಿದೆ ಎಂದರು.

ಮುಡಾ ಹಗರಣದ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ಅವರು 14 ಸೈಟ್‌ಗಳನ್ನು ವಾಪಸ್ ನೀಡಿದ್ದಾರೆ ಮತ್ತು ಇಡಿ 1055 ಸೈಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಸ್ಮರಿಸಿದ ಶ್ರೀವತ್ಸ ಅವರು, ಅಧಿಕಾರಿಗಳು ಈ ಒತ್ತುವರಿದಾರರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು. ಕೂಡಲೇ ಜಿಲ್ಲಾಡಳಿತ ಅಕ್ರಮ ಕಾಂಪೌಂಡ್ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ನಾವೇ ತೆರವು ಮಾಡುತ್ತೇವೆ; ಈ ಸಂದರ್ಭದಲ್ಲಿ ನನ್ನ ಮೇಲೆ ಕೇಸ್ ದಾಖಲಾದರೂ ನಾನು ಹೆದರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
