ಮೈಸೂರು, ನವೆಂಬರ್ 11, 2025 : ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ (ಸೋಮವಾರ) ಮೈಸೂರಿನಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ ಸಭೆ) ನಡೆಸಿದ ಬಳಿಕ ಇಂದು ಪತ್ರಿಕಾಗೋಷ್ಠಿ ನಡೆಸಿ, ಆಡಳಿತ, ಕಾನೂನು ಸುವ್ಯವಸ್ಥೆ ಹಾಗೂ ರಾಜಕೀಯದ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಆರು ತಿಂಗಳ ಬಳಿಕ ಕೆಡಿಪಿ ಸಭೆ ನಡೆಸಿದ್ದು, ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಆಡಳಿತ ಸುಧಾರಣೆ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಸಾರ್ವಭೌಮರು. ವಿನಾಕಾರಣ ಜನರನ್ನು ಅಲೆಸಬಾರದು,” ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಖಡಕ್ ಸೂಚನೆ ನೀಡಿದರು. ನಾನು ಯಾವುದೇ ಜಿಲ್ಲೆಯಲ್ಲಿರಲಿ, ಜನ ಸಮಸ್ಯೆ ಇಟ್ಟುಕೊಂಡು ಬೆಳಿಗ್ಗೆಯಿಂದ ಸಂಜೆವರೆಗೂ ಕಾದಿರುತ್ತಾರೆ. ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಸಮಸ್ಯೆಗಳು ಹೆಚ್ಚಾಗಿ ನನ್ನ ಬಳಿ ಬರುತ್ತವೆ ಎಂದರು. ಅಧಿಕಾರಿಗಳು ಕಚೇರಿಯಲ್ಲಿರಬೇಕು, ಜನರ ಅಹವಾಲು ಕೇಳಬೇಕು. ಕಾನೂನಿನ ಪ್ರಕಾರ ಬಗೆಹರಿಸುವ ಸಮಸ್ಯೆಗಳಿದ್ದರೆ ತಕ್ಷಣ ಬಗೆಹರಿಸಬೇಕು. ಕಾನೂನಿಗೆ ವಿರುದ್ಧವಾಗಿದ್ದರೆ ಹಿಂಬರಹ ಕೊಡಬೇಕು ಎಂದು ತಾಕೀತು ಮಾಡಿದರು.ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ತಮ್ಮ ತಾಲ್ಲೂಕು ಕೇಂದ್ರಗಳಲ್ಲೇ ವಾಸ್ತವ್ಯ ಹೂಡಬೇಕು. ಕೇಂದ್ರ ಸ್ಥಾನಗಳಲ್ಲಿ ವಾಸ ಮಾಡದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು.
ಕಾನೂನು ಸುವ್ಯವಸ್ಥೆ: ಡ್ರಗ್ಸ್ ವಿರುದ್ಧ ಸಮರ
ಮೈಸೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಸಿಎಂ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದರು. ನಾರ್ಕೊಟಿಕ್ ಮತ್ತು ಡ್ರಗ್ಸ್ ಜಾಲ ದೊಡ್ಡದಿದೆ. ಯುವಕರು ಮತ್ತು ವಿದ್ಯಾರ್ಥಿಗಳು ಇದರ ಚಟಕ್ಕೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೈಸೂರನ್ನು ಡ್ರಗ್ಸ್ ಮುಕ್ತ ಜಿಲ್ಲೆಯಾಗಿ ಮಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಅಪರಾಧಗಳು ಪೊಲೀಸರಿಗೆ ತಿಳಿಯದೆ ನಡೆಯಲು ಸಾಧ್ಯವಿಲ್ಲ. ಎಫ್‌ಐಆರ್ ದಾಖಲಾದ 90 ದಿನದ ಒಳಗೆ ಚಾರ್ಜ್ ಶೀಟ್ ಫೈಲ್ ಮಾಡಬೇಕು.ಕಳೆದ ವರ್ಷದ ಅಪರಾಧಗಳ ಅಂಕಿ-ಅಂಶಗಳನ್ನು ನೋಡಿ, ಅಪರಾಧಗಳು ನಡೆಯದಂತೆ ಕ್ರಮ ವಹಿಸಬೇಕು. ರೌಡಿಗಳನ್ನು ಬಿಟ್ಟು ಉಳಿದವರ ಜೊತೆ ಜನ ಸ್ನೇಹಿಯಾಗಿ ಇರಬೇಕು ಎಂದು ಹೇಳಿದರು. ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರೇಪ್ ಕೇಸ್ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಇಂತಹ ಘಟನೆಗಳು ಮರುಕಳಿಸಿದರೆ ಪೊಲೀಸ್ ಕಮಿಷನರ್ ನೇರ ಹೊಣೆ,” ಎಂದು ಎಚ್ಚರಿಕೆ ನೀಡಿದರು.
ಹುಲಿ ದಾಳಿ ಹಾಗೂ ಅರಣ್ಯ ಸಮಸ್ಯೆ
ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯ ಕುರಿತು ಮಾತನಾಡಿದ ಸಿಎಂ, ಹುಲಿ ದಾಳಿಯಿಂದ ಒಂದು ತಿಂಗಳಲ್ಲಿ ಮೂವರು ಸಾವನ್ನಪ್ಪಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ಬರುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೊಟ್ಟ ಉತ್ತರ ಸಮಾಧಾನ ತಂದಿಲ್ಲ.ಪ್ರಾಣಿಗಳಿಗೆ ಕಾಡಲ್ಲಿ ನೀರು ಮತ್ತು ಮೇವು ಸಿಗಬೇಕು. ವೈಜ್ಞಾನಿಕವಾಗಿ ಕಾರಣ ಹುಡುಕಲು ರಾಜ್ಯಮಟ್ಟದ ಸಭೆ ನಡೆಸುವುದಾಗಿ ತಿಳಿಸಿದರು. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕಾವಲು ಕಾಯಲು ಮತ್ತು ಅಗತ್ಯವಿರುವ ಕಡೆಗಳಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್ ಹಾಕಲು ಸೂಚನೆ ನೀಡಿರುವುದಾಗಿ ಹೇಳಿದರು.
ಶಿಕ್ಷಣ ಇಲಾಖೆ ಫಲಿತಾಂಶ ಕುಸಿತ
ಮೈಸೂರು ಜಿಲ್ಲೆಯಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರ ಸಂಖ್ಯೆ ಕುಸಿದಿರುವುದಕ್ಕೆ ಸಿಎಂ ಬೇಸರ ವ್ಯಕ್ತಪಡಿಸಿದರು. “ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 14ನೇ ಸ್ಥಾನಕ್ಕೆ ಕುಸಿದಿದೆ. ಉತ್ತಮ ಫಲಿತಾಂಶಕ್ಕಾಗಿ ಡಿಡಿಪಿಐ ಮತ್ತು ಬಿಇಒಗಳಿಗೆ ಸೂಚನೆ ನೀಡಿದ್ದೇನೆ,” ಎಂದು ತಿಳಿಸಿದರು.
ದೆಹಲಿ ಭೇಟಿ ಮತ್ತು ರಾಜಕೀಯ
ದೆಹಲಿ ಬಾಂಬ್ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ಇಂತಹ ಘಟನೆಗಳು ನಡೆಯಬಾರದು. ತನಿಖೆ ನಡೆದು ಸತ್ಯಾಂಶ ಹೊರಬರಲಿ. ಇಂತಹ ಘಟನೆಗಳು ಚುನಾವಣೆಗಳ ಮೇಲೆ ಪರಿಣಾಮ ಬೀರಲಿವೆ ಎಂದರು. ನವೆಂಬರ್ 15ರಂದು ತಾನು ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಕಪಿಲ್ ಸಿಬಲ್ ಅವರ ಕಾರ್ಯಕ್ರಮವಿದೆ. ರಾಹುಲ್ ಗಾಂಧಿಯವರ ಸಮಯವನ್ನು ಕೇಳಿದ್ದೇನೆ. ಸಮಯ ನೀಡಿದರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ, ಇಲ್ಲದಿದ್ದರೆ ಅಂದೇ ವಾಪಸ್ ಬರುತ್ತೇನೆ ಎಂದು ಸ್ಪಷ್ಟಪಡಿಸಿದರು.
- ಜಿ.ಟಿ. ದೇವೇಗೌಡ ವಿಚಾರ: ಶಾಸಕ ಜಿ.ಟಿ. ದೇವೇಗೌಡ ಅವರನ್ನು ಜೆಡಿಎಸ್ ಕೋರ್ ಕಮಿಟಿಯಿಂದ ತೆಗೆದುಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, “ಅದು ಅವರ ಪಕ್ಷಕ್ಕೆ ಸೇರಿದ್ದು. ನಾನು ಯಾರನ್ನೂ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುವುದಿಲ್ಲ, ಬಂದರೂ ಯಾಕೆ ಬಂದಿರಿ ಎಂದು ಕೇಳುವುದಿಲ್ಲ,” ಎಂದು ನುಡಿದರು.
