ಹಾಸನ, ಫೆಬ್ರವರಿ 16, 2026 : ನಟ ಯಶ್ ಅವರ ತಾಯಿ ಪುಷ್ಪಾ ಅವರು ಹಾಸನದಲ್ಲಿ ಖರೀದಿ ಮಾಡಿದ್ದ ಸೈಟ್ ವಿಚಾರವಾಗಿ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಅವರಿಗೆ ಮೊದಲ ಹಂತದ ಗೆಲುವು ಸಿಕ್ಕಿದೆ.
ಈ ಆಸ್ತಿಯು ತಮಗೆ ಸೇರಿದ್ದೆಂದು ಲಕ್ಷ್ಮಮ್ಮ ಎಂಬುವವರು ವಾದಿಸುತ್ತಿದ್ದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು ಮತ್ತು ಈ ಹಿಂದೆ ಕೋರ್ಟ್ ಲಕ್ಷ್ಮಮ್ಮ ಅವರ ಪರವಾಗಿಯೇ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಪುಷ್ಪಾ ಅವರು, ತಮ್ಮನ್ನು ಕಕ್ಷಿದಾರರನ್ನಾಗಿ ಪರಿಗಣಿಸದೆಯೇ ಈ ಹಿಂದಿನ ಆದೇಶ ನೀಡಲಾಗಿದೆ ಎಂದು ವಾದಿಸಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಮೂಲ ದಾವೆಯ ಆದೇಶ ಅನುಷ್ಠಾನಕ್ಕೆ ತಡೆ ನೀಡಿದೆಯಲ್ಲದೆ, ಪ್ರಸ್ತುತ ದಾಖಲಾಗಿರುವ ದಾವೆ ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೆ ವಿವಾದಿತ ಪ್ರಾಪರ್ಟಿಯನ್ನು ಮಾರಾಟ ಮಾಡುವುದು ಅಥವಾ ಅದರ ಮೂಲ ಸ್ವರೂಪವನ್ನು ಬದಲಾಯಿಸಬಾರದು ಎಂದು ಅರ್ಜಿದಾರರಿಗೂ ನಿರ್ಬಂಧ ಹೇರಿದೆ.
