ಮೈಸೂರು: ವಿಜಯನಗರ 3ನೇ ಹಂತದ ಸರ್ಕಾರಿ ಆಯುಷ್ ಚಿಕಿತ್ಸಾಲಯದ ಯೋಗ ತರಬೇತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಇದೇ ವೇಳೆ ಕೇಂದ್ರದ ಯೋಗ ತರಬೇತಿದಾರರಾದ ಎ.ಎಲ್. ಹೇಮಾ ಅವರನ್ನು ನಗರದ ಈ ಕ್ವಾಲಿಟಿ ಇನ್ಸ್ ಟಿಟ್ಯೂಟ್ ಫಾರ್ ಥಾಟ್ ಅಂಡ್ ಆಕ್ಷನ್(EITA) ಟ್ರಸ್ಟ್ ಪರವಾಗಿ ಅಧ್ಯಕ್ಷೆ ಡಾ.ಎನ್.ಸಿ. ಸುಮತಿ ಗುರು ಅವರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ನಂತರ ಡಾ.ಎನ್.ಸಿ.ಸುಮತಿ ಮಾತನಾಡಿ, ಸೇವಾ ಮನೋಭಾವದ ಧ್ಯೇಯೋದ್ದೇಶದಿಂದ ಸ್ಥಾಪಿಸಿರುವ ನಮ್ಮ ಟ್ರಸ್ಟ್ ಪರವಾಗಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಿಕೊಂಡು ಬರಲಾಗಿದೆ. ಈ ವರ್ಷ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜತೆ ಹಲವಾರು ಮಹಿಳೆಯರಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವ ಹೇಮಾ ಅವರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಅವರು ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.
ಯೋಗ ತರಬೇತಿ ಕೇಂದ್ರದ ಕಲಿಕಾರ್ಥಿಗಳು ಹೇಮಾ ಅವರಿಗೆ ಮಹಿಳಾ ದಿನಾಚರಣೆ ಅಂಗವಾಗಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಎ.ಎಲ್.ಹೇಮಾ ಮಾತನಾಡಿ, ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮನಾಗಿ ಕೆಲಸ ನಿರ್ವಹಿಸುವ ಮೂಲಕ ನಾರಿಶಕ್ತಿ ಎಂತಹುದು ಎಂದು ಸಮಾಜಕ್ಕೆ ತೋರ್ಪಡಿಸುತ್ತಿದ್ದಾರೆ. ಎಂತಹುದೇ
ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಯೋಗ ಪ್ರಶಿಕ್ಷಣಾರ್ಥಿಗಳಾದ ನಿವೃತ್ತ ಡಿಡಿಪಿಐ ಮಂಜುಳಾ, ಉಪನ್ಯಾಸಕಿ ದಾಕ್ಷಾಯಿಣಿ, ಕೆ.ಎಚ್.ಬೀನಾ, ವಿಜಯಾ, ಲಕ್ಷ್ಮಿ, ಜಾಕ್ವಿಲಿನಾ, ರೂಪಾ, ಸೋಮಲತಾ, ಶೋಭಾರಾಣಿ, ಅನಿತಾ, ಎಚ್.ಆರ್.ವಾಣಿಶ್ರೀ, ಮೇಘ, ಪೂರ್ಣಿಮಾ, ರಾಧಾ, ಶ್ರಾವಂತಿ, ಚೈತ್ರ, ಮಮತಾ ಇತರರು ಹಾಜರಿದ್ದರು.