ಮೈಸೂರು, ಫೆಬ್ರವರಿ 9, 2026 : ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿರುವ ಕೆಸರೆ ಬಡಾವಣೆಯಲ್ಲಿ ಇಂದು ಭೀಕರ ಬೆಂಕಿ ಅವಘಡ ಸಂಭವಿಸಿದೆ.
ಮೈಸೂರು-ಬೆಂಗಳೂರು ಹೆದ್ದಾರಿಯ ಸಮೀಪವಿರುವ ಹಳೆ ವಸ್ತುಗಳ ಸಂಗ್ರಹಣಾ ಗೋದಾಮುಗಳಲ್ಲಿ ಈ ದುರ್ಘಟನೆ ನಡೆದಿದ್ದು, ಪ್ಲೇವುಡ್ ಮತ್ತು ಸೋಫಾ ತಯಾರಿಕಾ ಘಟಕಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಗೋದಾಮುಗಳಿಗೆ ಬೆಂಕಿ ವ್ಯಾಪಿಸಿ, 4 ಗೋದಾಮುಗಳು ಬೆಂಕಿ ಕಿನ್ನಾಲಿಗೆ ಸುಟ್ಟುಕರಕಲಾಗಿದೆ.
ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇರಳದಿಂದ ಪ್ರತಿನಿತ್ಯ ಬರುತ್ತಿದ್ದ ಸುಮಾರು ನಾಲ್ಕು ಟನ್ ಪ್ಲಾಸ್ಟಿಕ್ ವೈರ್‍ಗಳಿಂದ ಕಾಪರ್ (ತಾಮ್ರ) ಹೊರತೆಗೆಯಲು ರಾತ್ರಿ ವೇಳೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಹಾರಿದ ಕಿಡಿಯು ಪಕ್ಕದ ಗೋದಾಮುಗಳಿಗೆ ವ್ಯಾಪಿಸಿ ಈ ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗೋದಾಮಿನ ಮಾಲೀಕ ನವಾಜ್ ಅವರು, ಮುಬಾರಕ್ ಎಂಬ ವ್ಯಕ್ತಿಯೇ ಈ ಅವಘಡಕ್ಕೆ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಪರ್ ವೈರ್ ಎಕ್ಸ್‌ಟ್ರಾಕ್ಟ್ ಮಾಡಲು ಅಕ್ರಮವಾಗಿ ಬೆಂಕಿ ಹಾಕದಂತೆ ಸ್ಥಳೀಯರು ಮತ್ತು ನಾವು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಮುಬಾರಕ್ ನಿರ್ಲಕ್ಷ್ಯ ವಹಿಸಿದ್ದ ಎನ್ನಲಾಗಿದೆ.
ಘಟನೆಯ ಸಂಬಂಧ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದ್ದು, ತಪ್ಪಿತಸ್ಥನ ವಿರುದ್ಧ ದೂರು ನೀಡಲು ಮಾಲೀಕರು ಮುಂದಾಗಿದ್ದಾರೆ.
